ಬಿಜೆಪಿ ಗೆಲ್ಲುತ್ತದೆಯೆಂಬ ಸಮೀಕ್ಷೆಯ ವಾಟ್ಸ್ ಆ್ಯಪ್ ಸಂದೇಶ ಸುಳ್ಳು : ಸ್ಪಷ್ಟೀಕರಣ ನೀಡಿದ ಬಿಬಿಸಿ
.jpg)
ಬೆಂಗಳೂರು,ಮೇ.8 : ಬಿಬಿಸಿ ನಡೆಸಿದೆಯೆನ್ನಲಾದ ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸುವುದೆಂದು ಹೇಳಿಕೊಂಡ ವಾಟ್ಸ್ ಆ್ಯಪ್ ಸಂದೇಶವೊಂದು ವೈರಲ್ ಆದ ನಂತರ ಬಿಬಿಸಿ ಸ್ಪಷ್ಟೀಕರಣ ನೀಡಿ ತಾನು ಇಂತಹ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿಲ್ಲ ಹಾಗೂ ಆ ಸಮೀಕ್ಷೆ ಹಾಗೂ ಸಂದೇಶ ನಕಲಿ ಎಂದು ಹೇಳಿದೆ.
ವೈರಲ್ ಸಂದೇಶದಲ್ಲಿ ನೀಡಲಾದ ಸಮೀಕ್ಷೆ ಲಿಂಕ್, ಬಿಬಿಸಿ ಇಂಡಿಯಾ ಪುಟಕ್ಕೆ ಕರೆದೊಯ್ಯುತ್ತದೆ. ವಾಟ್ಸ್ ಆ್ಯಪ್ ಸಂದೇಶದಲ್ಲಿ ಜನತಾ ಕಿ ಬಾತ್ ಸಮೀಕ್ಷೆ ಬಿಜೆಪಿಗೆ ದೊಡ್ಡ ಗೆಲುವು ನೀಡುವುದೆಂದು ಭವಿಷ್ಯ ನುಡಿದಿದೆ ಎಂದು ಹೇಳಿದೆ.
ಈ ನಕಲಿ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 135 ಸ್ಥಾನಗಳು, ಜೆಡಿಎಸ್ ಗೆ 45, ಕಾಂಗ್ರೆಸ್ 35 ಹಾಗೂ ಇತರರಿಗೆ 19 ಸ್ಥಾನಗಳು ದೊರೆಯುವುದೆಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಸಮೀಕ್ಷೆಗಾಗಿ 10.20 ಲಕ್ಷ ಜನರನ್ನು ಸಂಪರ್ಕಿಸಲಾಗಿತ್ತು ಎಂದೂ ನಕಲಿ ಸಂದೇಶದಲ್ಲಿ ತಿಳಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ 95 ಸ್ಥಾನಗಳನ್ನು ಹೆಚ್ಚು ಪಡೆದು 135 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದೂ ನಕಲಿ ಸಂದೇಶ ತಿಳಿಸಿತ್ತು.





