ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ನಾನೇ ಪ್ರಧಾನಿ: ರಾಹುಲ್ ಗಾಂಧಿ

ಬೆಂಗಳೂರು, ಮೇ 8: 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಖಂಡಿತ ನಾನು ಪ್ರಧಾನಮಂತ್ರಿ ಆಗುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಹೇಳಿದರು.
ಮಂಗಳವಾರ ನಗರದ ರೇಸ್‌ಕೋರ್ಸ್ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಸಮೃದ್ಧ ಭಾರತ ಪ್ರತಿಷ್ಠಾನ ಉದ್ಘಾಟಿಸಿದ ಬಳಿಕ ನಡೆದ ಸಂವಾದದಲ್ಲಿ ನೀವು ಪ್ರಧಾನಮಂತ್ರಿ ಆಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪರ ಫಲಿತಾಂಶ ಹೇಗಿರುತ್ತದೆ ಎಂಬುದರ ಮೇಲೆ ಇದು ನಿಂತಿರುತ್ತದೆ ಎಂದರು.
ಬಿಜೆಪಿ ಹಾಗೂ ಆರೆಸ್ಸೆಸ್ ಸರಕಾರದ ಆಡಳಿತದಲ್ಲಿ ಪ್ರವೇಶಿಸಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ತಮ್ಮ ಪ್ರಭಾವ ಬೀರುತ್ತಿದೆ. ಇದರ ಪರಿಣಾಮವೇ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಎಂದು ಆರೋಪಿಸಿದ ಅವರು, ನಾವು ಭಾರತವನ್ನು ಮುನ್ನಡೆಸಲು ಚುನಾವಣೆ ಗೆಲ್ಲುತ್ತೇವೆ. ಆದರೆ, ಆರೆಸ್ಸೆಸ್ ಹಾಗೂ ಬಿಜೆಪಿ ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಗೆಲ್ಲುತ್ತಾರೆ. ಇದು ಅವರಿಗೂ ಹಾಗೂ ನಮಗೂ ಇರುವ ವ್ಯತ್ಯಾಸ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಚುನಾವಣೆ ಪ್ರಣಾಳಿಕೆ ಮುಚ್ಚಿದ ಕೊಠಡಿಯಲ್ಲಿ ಸಿದ್ದಪಡಿಸುತ್ತಾರೆ. ಆದರೆ, ಕಾಂಗ್ರೆಸ್ ಜನರ ಸಂವಾದ ನಡೆಸಿ ಪ್ರಣಾಳಿಕೆ ಸಿದ್ದಪಡಿಸುತ್ತದೆ. ದೇಶದಲ್ಲಿ ಉದ್ಯೋಗ ಸೃಷ್ಟಿಗೆ 10-15 ಕಂಪೆನಿಗಳ ಮೇಲೆ ಮಾತ್ರ ಅವಲಂಬಿತರಾಗಿದ್ದಾರೆ. ಹೀಗಾಗಿ ಅವರು ಜಾರಿಗೆ ತಂದಿರುವ ಬ್ಯಾಂಕಿಂಗ್ ನೀತಿ, ಕೈಗಾರಿಕಾ ನೀತಿಗಳಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿಯಾಗುತ್ತಿಲ್ಲ ಎಂದು ರಾಹುಲ್ ಹೇಳಿದರು.
ಮಹಿಳಾ ಮುಖ್ಯಮಂತ್ರಿಗಳು ಹೆಚ್ಚಾಗಬೇಕು
ಮಹಿಳಾ ಸಶಕ್ತೀಕರಣಕ್ಕಾಗಿ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಬೇಕು. ನನ್ನ ಉದ್ದೇಶಗಳ ಬಗ್ಗೆ ಬಹುತೇಕ ಪುರುಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಿಗೂ ಅಸಮಾಧಾನ ಇರಬಹುದು. ಆದರೆ, ಮುಂದಿನ 10 ವರ್ಷದಲ್ಲಿ ಮಹಿಳಾ ಮುಖ್ಯಮಂತ್ರಿಗಳು ಹೆಚ್ಚಾಗಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ನೀಡಿರುವ ಟಿಕೆಟ್‌ಗಳ ಬಗ್ಗೆಯೂ ನನಗೆ ಅತೃಪ್ತಿ ಇದೆ. ಆದರೆ, ಬಿಜೆಪಿಗಿಂತ ಹೆಚ್ಚು ಕೊಟ್ಟಿದ್ದೇವೆ ಎಂಬುದಷ್ಟೇ ನೆಮ್ಮದಿ ಎಂದು ರಾಹುಲ್ ಗಾಂಧಿ ಹೇಳಿದರು.







