ವಾಹನ ನಿರಾಕರಿಸಿದ ಆಸ್ಪತ್ರೆ : ಪತ್ನಿಯ ಕಳೇಬರ ಹೆಗಲಲ್ಲೇ ಸಾಗಿಸಿದ ವ್ಯಕ್ತಿ
ಉತ್ತರ ಪ್ರದೇಶದಲ್ಲಿ ಇನ್ನೊಂದು ಅಮಾನವೀಯ ಪ್ರಕರಣ

ಚಿತ್ರ ಕೃಪೆ : ANI
ಬಡೌನ್,ಮೇ.8 : ಉತ್ತರ ಪ್ರದೇಶದ ಬಡೌನ್ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯೊಂದು ಮಹಿಳೆಯ ಕಳೇಬರ ಸಾಗಿಸಲು ವಾಹನ ಒದಗಿಸದೇ ಇದ್ದ ಪರಿಣಾಮ ಮಹಿಳೆಯ ಪತಿ ಆಕೆಯ ಕಳೇಬರವನ್ನು ಹೊತ್ತುಕೊಂಡು ಮನೆಗೆ ಸಾಗಿಸಿದ ಘಟನೆ ನಡೆದಿದೆ. ಆ ವ್ಯಕ್ತಿ ಸ್ಥಳೀಯ ಟೆಂಪೋ ಚಾಲಕರಲ್ಲಿ ತನ್ನ ಪತ್ನಿಯ ಕಳೇಬರ ಸಾಗಿಸಲು ಬೇಡುತ್ತಿರುವುದೂ ಕಂಡು ಬಂದಿತ್ತು.
ಆದರೆ ಆಸ್ಪತ್ರೆ ಮಾತ್ರ ತಾನು ಮೃತ ದೇಹ ಸಾಗಿಸಲು ವಾಹನವನ್ನು ನಿರಾಕರಿಸಿಲ್ಲ ಎಂದು ಹೇಳಿದೆ. ತನ್ನ ಬಳಿ ಎರಡು ವಾಹನಗಳಿದ್ದು ಕೇಳಿದವರಿಗೆ ಅದನ್ನು ನೀಡಲಾಗುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಮುಖ್ಯ ವೈದ್ಯಕೀಯ ಅಧಿಕಾರಿ ಆದೇಶಿಸಿದ್ದಾರೆ.
ಕೆಲ ಸಮಯದ ಹಿಂದೆ ಆದಿವಾಸಿ ವ್ಯಕ್ತಿಯೊಬ್ಬ ಕಾಲಾಹಂಡಿಯಲ್ಲಿ 10 ಕಿಮೀ ದೂರದ ತನಕ ತನ್ನ ಪತ್ನಿಯ ಕಳೇಬರವನ್ನು ವಾಹನ ದೊರೆಯದೆ ಹೆಗಲಲ್ಲಿ ಹೊತ್ತುಕೊಂಡು ಹೋದ ಘಟನೆ ಸಾಕಷ್ಟು ಆಕ್ರೋಶ ಸೃಷ್ಟಿಸಿತ್ತೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವಾಹನ ದೊರೆಯದ ಕಾರಣ ತಮ್ಮ ತಂದೆಯ ಕಳೇಬರವನ್ನು ಮಕ್ಕಳು ಆಟೋರಿಕ್ಷಾವೊಂದರಲ್ಲಿ ಸಾಗಿಸಿದ ಘಟನೆಯೊಂದು ಈ ಹಿಂದೆ ಬಾರಾಬಂಕಿಯಿಂದ ವರದಿಯಾಗಿತ್ತು.





