ಮೈಸೂರು ವಲಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
.gif)
ಮಂಗಳೂರು, ಮೇ 8: ಮೈಸೂರು ವಲಯ (ಮಂಡ್ಯ, ಮೈಸೂರು, ಚಾಮರಾಜ ನಗರ,, ಕೊಡಗು, ಉಡುಪಿ, ದ.ಕ., ಚಿಕ್ಕಮಗಳೂರು, ಹಾಸನ) ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಪ್ರಣಾಳಿಕೆಯಲ್ಲಿ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಬೈಕಂಪಾಡಿಯಲ್ಲಿ ಸಣ್ಣ ಉದ್ಯಮಗಳಿಗೆ ಆದ್ಯತೆ, ಮಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನ ಯಾನ ಸಂಪರ್ಕ ಕಲ್ಪಿಸುವುದು, ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಅನ್ನು 2,450 ಮೀಟರ್‌ನಿಂದ 3,050 ಮೀಟರ್‌ಗೆ ಏರಿಸುವುದು, ಮಂಗಳೂರಿನಿಂದ ಮುಂಬೈ ಹಾಗೂ ಬೆಂಗಳೂರು ರೈಲು ಹಳಿಗಳ ಜೋಡಿಮಾರ್ಗ ನಿರ್ಮಿಸುವುದು, ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಕರಾವಳಿ ಮತ್ತು ನದಿ ಕಿನಾರೆಗಳನ್ನು ಮನೋರಂಜನಾ ತಾಣವಾಗಿ ಅಭಿವೃದ್ಧಿಪಡಿಸುವುದು, ಜೋಕಟ್ಟೆ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳ ನಡುವೆ ಷಟ್ಪಥ ರಸ್ತೆಯನ್ನು ನಿರ್ಮಿಸಲಾಗುವುದು, ಬಂದರು ಅಭಿವೃದ್ಧಿ ಪ್ರಾಧಿಕಾರ ರಚಿಸುವುದು, ಜಿಲ್ಲೆಯಲ್ಲಿ 3,985 ಎಕರೆ ಜಮೀನಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವುದು, ಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವುದು.
ದೇಶದ ಸಿಲಿಕಾನ್ ಕಣಿವೆ ಮತ್ತು ರಾಜ್ಯದ ಬಿಪಿಒ ಕೇಂದ್ರವಾಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು, ಮೂರು ಬೃಹತ್ ಐಟಿ ಉದ್ಯಮಗಳ ಐಟಿ ಪಾರ್ಕ್ ಸ್ಥಾಪಿಸುವುದು, ಸಿಆರ್‌ಝೆಡ್ ಮುಖ್ಯ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರಿಸುವುದು, ಮಂಗಳೂರಿನಿಂದ ನೇರವಾಗಿ ಯುರೋಪ್ ಮತ್ತು ಅಮೆರಿಕಕ್ಕೆ ವಾಯುಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವುದು.
ಜಲಮಾರ್ಗ ಪ್ರವಾಸೋದ್ಯಮಕ್ಕೆ ನೆರವು ನೀಡುವುದು, ಬೃಹತ್ ಕೈಗಾರಿಕೆಗಳಿಗೆ 3 ಸಾವಿರ ಎಕರೆ ಜಮೀನು ಗುರುತಿಸಿ ಮೀಸಲಿಡುವುದು, ಬೃಹತ್ ಕೈಗಾರಿಕೆ ಉಪ್ಪು ನೀರು ಸಂಸ್ಕರಣಾ ಘಟಕ ಸ್ಥಾಪಿಸುವುದು, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದು, ಮಂಗಳೂರಿನಲ್ಲಿ ಬೀಟಾ (ಬೈಕಂಪಾಡಿ ಕೈಗಾರಿಕಾ ಪಟ್ಟಣ ಪ್ರಾಧಿಕಾರ) ಸ್ಥಾಪಿಸುವುದು.
ಮಂಗಳೂರು-ಉಡುಪಿ ಜಿಲ್ಲೆಯನ್ನು ಒಳಗೊಂಡ ಶಿಕ್ಷಣ ಕೇಂದ್ರ ವಲಯ ಸ್ಥಾಪನೆ, ಜಿಲ್ಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆ, ಮಹಿಳಾ ಪೊಲೀಸ್ ಠಾಣೆಗಳ ಹೆಚ್ಚಳ, ಮಧ್ಯಸ್ತಿಕೆ ಮತ್ತು ವ್ಯಾಜ್ಯ ಪರಿಹಾರ ಕೇಂದ್ರ ಸ್ಥಾಪಿಸುವುದು, ವೈದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಮಾಜಿ ಕಾರ್ಯದರ್ಶಿ ಸಾನಿ ಮೋಳ್ ಉಸ್ಮಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ಮೇಯರ್ ಭಾಸ್ಕರ ಮೊಯ್ಲಿ, ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಬೇಬಿ ಕುಂದರ್, ಸಂತೋಷ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.