ಕೋಮುಶಕ್ತಿ ಹಾಗೂ ರಾಜಕೀಯ ವ್ಯಾಪಾರಿಗಳನ್ನು ವಿರೋಧಿಸಿ: ಅಹಿಂದ
ಉಳ್ಳಾಲ, ಮೇ 8: ರಾಜ್ಯದಲ್ಲಿ ಅಹಿಂದ ನೇತಾರ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅಹಿಂದ ವರ್ಗಗಳಿಗಾಗಿ ಮತ್ತು ಮೇಲ್ವರ್ಗದ ಬಡ ಜನರಿಗಾಗಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿ ರಾಜ್ಯದ ಜಾತ್ಯತೀತ ಪರಂಪರೆಯನ್ನು ಬಲಪಡಿಸಿದೆ. ಈ ಬಾರಿಯೂ ಸಿದ್ದರಾಮಯ್ಯ ಮುಂದಾಳುತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುತ್ತಿರುವುದರಿಂದ ಅಹಿಂದ ತತ್ವ ಮನೋಭಾವವುಳ್ಳ ದ.ಕ. ಮತ್ತು ಉಡುಪಿ ಜಿಲ್ಲೆಯ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ದ.ಕ. ಅಹಿಂದ ಜನ ಚಳವಳಿಯ ಉಪಾಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಹೇಳಿದ್ದಾರೆ.
ತೊಕ್ಕೊಟ್ಟಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಅಹಿಂದ ಜನರು ಒಗ್ಗಟ್ಟಾಗುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದವರು. ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಅಭ್ಯರ್ಥಿಗಳಿಗೆ ಸಹಕರಿಸುವ ಉದ್ದೇಶದಿಂದ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.
ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸಹಕರಿಸುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮೇಯರ್ ಅಶ್ರಫ್‌ರನ್ನು ಕಣಕ್ಕಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂತೋಷ್ ರೈ ಬೋಳಿಯಾರ್ ಕೋಮುಶಕ್ತಿಗಳ ಮತ್ತು ಅಸಮಾನತೆ ಹೇರುವ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಈ ಬಗ್ಗೆ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು ಎಚ್ಚರವಹಿಸಬೇಕು. ಕೋಮುಶಕ್ತಿಗಳನ್ನು ಹಾಗೂ ರಾಜಕೀಯ ವ್ಯಾಪಾರಿಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು ಈ ಚುನಾವಣೆಯಲ್ಲಿ ವಿರೋಧಿಸಬೇಕಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಅವರನ್ನು ಪುನರಾಯ್ಕೆ ಮಾಡುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಜನ ಚಳವಳಿಯ ಅಧ್ಯಕ್ಷ ವಾಸುದೇವ ಬೋಳೂರು, ಕಾರ್ಯಾಧ್ಯಕ್ಷ ಪದ್ಮನಾಭ ನರಿಂಗಾನ, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಕೋಶಾಧಿಕಾರಿ ವೆಲೇರಿಯನ್ ಎಸ್.ಆರ್.ಲೋಬೊ ಉಪಸ್ಥಿತರಿದ್ದರು.







