ವಿಶ್ವಕರ್ಮ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ: ಉಡುಪಿ ವಿಶ್ವಕರ್ಮ ಒಕ್ಕೂಟ ಆರೋಪ

ಉಡುಪಿ, ಮೇ 8: ಉಡುಪಿ ಜಿಲ್ಲೆಯಲ್ಲಿ ಅಧಿಕೃತ ದಾಖಲೆ ಪ್ರಕಾರ ವಿಶ್ವಕರ್ಮ ಸಮುದಾಯದ ಒಟ್ಟು 63500 ಮತದಾರರಿದ್ದು, ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಮಾಡುತ್ತಿವೆ ಎಂದು ಉಡುಪಿ ವಿಶ್ವಕರ್ಮ ಒಕ್ಕೂಟ ಆರೋಪಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾರಾಮ ಆಚಾರ್ಯ, ವಿಶ್ವಕರ್ಮ ಸಮುದಾಯ ವನ್ನು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷ್ಯಿಸುತ್ತಿದ್ದು, ಯಾವುದೇ ಪಕ್ಷದಲ್ಲೂ ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಆದುದರಿಂದ ನಮ್ಮ ಪ್ರಾಬಲ್ಯವನ್ನು ಈ ಬಾರಿಯ ಚುನಾವಣೆಯಲ್ಲಿ ತೋರಿಸಲೇಬೇಕಾದ ಅನಿವಾರ್ಯತೆ ಎದುರಾ ಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡರನ್ನು ಭೇಟಿಯಾಗಿ ವಿವಿಧ ಭರವಸೆಗಳನ್ನು ನೀಡುವ ರಾಜಕಾರಣಿಗಳು, ಬಳಿಕ ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಸಮುದಾಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುವಂತೆ ಮೂರು ಪ್ರಮುಖ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಮನವಿ ನೀಡಲಾಗಿತ್ತು. ಆದರೆ ಯಾವುದೇ ಪಕ್ಷ ಈ ಬಗ್ಗೆ ಗಮನ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಮಾತನಾಡಿ, ಬೈಂದೂರು ಕ್ಷೇತ್ರದ ಉಪ್ರಳ್ಳಿ ದೇವಸ್ಥಾನ ವ್ಯಾಪ್ತಿಯಲ್ಲಿ 11,500, ಬಾರ್ಕೂರು ದೇವಸ್ಥಾನ ವ್ಯಾಪ್ತಿಯಲ್ಲಿ 28,000, ಕಟಪಾಡಿ ದೇವಸ್ಥಾನ ವ್ಯಾಪ್ತಿಯಲ್ಲಿ 16 ಸಾವಿರ ಮತದಾರರು, ಕಾರ್ಕಳ ದೇವಸ್ಥಾನ ವ್ಯಾಪ್ತಿಯಲ್ಲಿ 8000ಕ್ಕೂ ಅಧಿಕ ಮತದಾರರು, ಕಾಪುವಿನಲ್ಲಿ 10,000 ಮತದಾರು ನಮ್ಮ ಸಮುದಾಯದಲ್ಲಿ ಇದ್ದಾರೆ. ಆದರೆ ಪಕ್ಷದವರು ನಮ್ಮ ಸಮುದಾಯದ ಜನಸಂಖ್ಯೆಯನ್ನು ವಾಸ್ತವ ಸಂಖ್ಯೆಗಿಂತ ಕಡಿಮೆ ನೀಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ನೆರಂಬಳ್ಳಿ ಪ್ರಕಾಶ್ ಆಚಾರ್ಯ, ಅರುಣ್ ಆಚಾರ್ಯ, ಸತೀಶ್ ಆಚಾರ್ಯ ಮಂದಾರ್ತಿ, ನಿತ್ಯಾನಂದ ಆಚಾರ್ಯ ಉಪಸ್ಥಿತರಿದ್ದರು.







