ಪತ್ನಿ, ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧ

ಅಗರ್ತಲ, ಮೇ 8: ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಟ್ಟು ಕೊಂದ ಯೋಧನೋರ್ವ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತ್ರಿಪುರ ರಾಜ್ಯ ರೈಫಲ್ಸ್ (ಟಿಎಸ್‌ಆರ್) ಪಡೆಯ 40ರ ಹರೆಯದ ಮಾಣಿಕ್ ಘೋಷ್ ಗೋಲ್‌ಬಝಾರ್ ಹೊರಠಾಣಾ ವ್ಯಾಪ್ತಿಯ ರಬೀಂದ್ರನಗರ ಎಂಬಲ್ಲಿರುವ ತನ್ನ ಮನೆಯಲ್ಲಿ ತನ್ನ ಸರ್ವಿಸ್ ರೈಫಲ್‌ನಿಂದ ಹೆಂಡತಿ, ಮಗ ಮತ್ತು ಮಗಳನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ. ಈತ ಹಲವು ದಿನಗಳಿಂದ ಆತಂಕಕ್ಕೆ ಒಳಗಾದವನಂತಿದ್ದ ಎಂದು ಸ್ಥಳೀಯರು ತಿಳಿಸಿದ್ದು ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಯೋಧ ತನ್ನ ಸರ್ವಿಸ್ ರೈಫಲ್ ಅನ್ನು ಮನೆಗೆ ಕೊಂಡೊಯ್ದಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ. ಕಳೆದ ಶನಿವಾರ ಜಮ್ಮು-ಕಾಶ್ಮೀರದ ನಿವಾಸಿಯಾಗಿದ್ದ ಬಿಎಸ್‌ಎಫ್ ಯೋಧ ಶಿಶುಪಾಲ್ ಎಂಬಾತ ತನ್ನ ಮೂವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ಸ್ವಯಂ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.





