ಚಿಕ್ಕಮಗಳೂರು: ಸಿಟಿ ರವಿ ಮತಯಾಚನೆ ವೇಳೆ ಗ್ರಾಮಸ್ಥರಿಂದ ಅಡ್ಡಿ
ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು
.jpg)
ಚಿಕ್ಕಮಗಳೂರು, ಮೇ 8: ನಗರದ ಬಡಾವಣೆಯೊಂದರಲ್ಲಿ ಮತಯಾಚನೆಗೆ ಎತ್ತಿನಗಾಡಿಯಲ್ಲಿ ತೆರಳಿದ್ದ ಶಾಸಕ ಸಿ.ಟಿ.ರವಿ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದ ಘಟನೆ ಮಂಗಳವಾರ ವರದಿಯಾಗಿದೆ.
ನಗರದ ವಾರ್ಡ್ ನಂ.35ರಲ್ಲಿನ ಕೆಂಪನಹಳ್ಳಿ ಬಡಾವಣೆಗೆ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಸಿಟಿ ರವಿ ಅವರನ್ನು ಎತ್ತಿನಗಾಡಿಯಲ್ಲಿ ಕೂರಿಸಿಕೊಂಡು ರೋಡ್ ಶೋ ಮೂಲಕ ಮತಯಾಚನೆಗೆ ಹೋಗಿದ್ದರು. ಈ ವೇಳೆ ವಾರ್ಡ್ ಸದಸ್ಯ ಪುಷ್ಪರಾಜ್ ಕೂಡ ರವಿ ಜತೆಗಿದ್ದರು. ಶಾಸಕ ರವಿ ಹಾಗೂ ಕಾರ್ಯಕರ್ತರು ಬಡಾವಣೆ ಪ್ರವೇಶಿಸುತ್ತಿದ್ದಂತೆ ಎದುರಿಗೆ ಬಂದ ಬಡಾವಣೆಯ ಅಶೋಕ್ ಹಾಗೂ ಕೆಲ ಯುವಕರ ಗುಂಪು ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಜಯಘೋಷ ಹಾಕಿದರು ಎಂದು ತಿಳಿದು ಬಂದಿದೆ.
'ಶಾಸಕ ರವಿ ಕಳೆದ 15 ವರ್ಷಗಳಿಂದ ಶಾಸಕರಾಗಿದ್ದಾರೆ. ಆದರೆ ಕೆಂಪನಹಳ್ಳಿ ಬಡಾವಣೆಯ ಸಮಸ್ಯೆಗಳಿಗೆ ಅವರೂ ಸೇರಿದಂತೆ ನಗರಸಭೆ ಸದಸ್ಯರು ಪರಿಹಾರ ಒದಗಿಸಿಲ್ಲ. ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಶಾಸಕರು ಹಾಗೂ ನಗರಸಭೆ ಸದಸ್ಯ ಪುಷ್ಪರಾಜ್ ಅವರ ಗಮನಕ್ಕೆ ಪ್ರತೀ ವರ್ಷವೂ ಸಮಸ್ಯೆ ಹೇಳಿಕೊಂಡರೂ ಸ್ಪಂದಿಸಿಲ್ಲ. ಬಡಾವಣೆಯತ್ತ ಶಾಸಕರು ತಲೆಯೂ ಹಾಕಿಲ್ಲ. ವಾರ್ಡ್ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಅವರಿಗೆ ಯಾವುದೇ ಅರ್ಹತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವಕರು ಎತ್ತಿನಗಾಡಿ ಮುಂದೆ ಹೋಗದಂತೆ ತಡೆದರು. ಅಲ್ಲದೇ ಬಡಾವಣೆಯಲ್ಲಿ ಮತಯಾಚಿಸದಂತೆ ಅಡ್ಡಿಪಡಿಸಿದರು ಎನ್ನಲಾಗಿದೆ. ಇನ್ನು ಕೆಲ ಯುವಕರು 'ಸಿಟಿ ರವಿ ಕುರುಬ ಸಮುದಾಯದವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕುರುಬರ ಓಟ ಪಡೆಯಲು ಎಣ್ಣೆ, ತುಂಡು ಸಾಕು ಎಂದು ಅವಮಾನಿಸಿದ್ದಾರೆ. ಅಂತವರಿಗೆ ನಮ್ಮ ಓಟು ಯಾಕೆ ನೀಡಬೇಕು' ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಿಟಿ ರವಿ ಹಾಗೂ ಎತ್ತಿನಗಾಡಿಯ ಸುತ್ತು ಸುತ್ತವರೆದ ಬಿಜೆಪಿ ಕಾರ್ಯಕರ್ತರು ಹಾಗೂ ಬಡಾವಣೆಯ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ರವಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದರಾದರೂ ಯುವಕರು ಕೇಳಲಿಲ್ಲ. ಕಾರ್ಯಕರ್ತರ ಮಾತಿನ ಭರಾಟೆಯ ನಡುವೆ ಕೆಲವರು ಕೈಕೈ ಮಿಲಾಯಿಸಿದ್ದು, ಈ ವೇಳೆ ಶಾಸಕ ಸಿಟಿ ರವಿ ಅವರನ್ನೂ ಕೆಲವರು ಎಳೆದಾಡಿದ ದೃಶ್ಯಗಳು ಮೊಬೈಲ್‍ಗಳಲ್ಲಿ ಸೆರೆಯಾಗಿವೆ. ನಂತರ ಬಡಾವಣೆಯ ಕೆಲ ಮುಖಂಡರು ಆಕ್ರೋಶಗೊಂಡಿದ್ದ ಯುವಕರನ್ನು ಸಮಾಧಾನ ಪಡಿಸಿದರು. ನಂತರ ಕೆಲ ಹೊತ್ತು ಶಾಸಕ ರವಿ ಬಡಾವಣೆಯಲ್ಲಿ ಮತಯಾಚನೆ ಮಾಡಿದರೆಂದು ತಿಳಿದು ಬಂದಿದೆ. ಮಂಗಳವಾರ ಕೆಂಪನಹಳ್ಳಿ ಬಡಾವಣೆಯಲ್ಲಿ ನಡೆದ ಈ ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.







