ಬಂಟ ಸಮಾಜಕ್ಕೆ ಲೋಬೊರಿಂದ ದ್ರೋಹ: ಹರಿಕೃಷ್ಣ ಬಂಟ್ವಾಳ ಆರೋಪ

ಮಂಗಳೂರು, ಮೇ.8: ಶಾಸಕ ಜೆ.ಆರ್. ಲೋಬೊ ಅವರು ಸುಂದರ ರಾಮ್ ಶೆಟ್ಟಿ ಹೆಸರನ್ನು ರಸ್ತೆಗೆ ಇಡಲು ಅಡ್ಡಿಪಡಿಸಿ, ಬಂಟರ ಸಮಾಜಕ್ಕೆ ದ್ರೋಹ ಮಾಡಿದ್ದು ಮಾತ್ರವಲ್ಲದೆ, ನಗರದ ಲೇಡಿಹಿಲ್ ವೃತ್ತಕ್ಕೆ ನಾರಾಯಣಗುರು ವೃತ್ತ ಎಂದು ಹೆಸರಿಡುವ ವಿಚಾರದಲ್ಲೂ ಬಿಲ್ಲವ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಅಖಿಲ ಭಾರತ ಬಿಲ್ಲವ ಮಹಾ ಒಕ್ಕೂಟದ ವಕ್ತಾರ ಹರಿಕೃಷ್ಣ ಬಂಟ್ವಾಳ ಇಂದಿಲ್ಲಿ ಆರೋಪಿಸಿದರು.
ಲೈಟ್‌ಹಿಲ್ ಹೌಸ್ ರೋಡಿಗೆ ವಿಜಯಬ್ಯಾಂಕ್ ಸಂಸ್ಥಾಪಕ ಸುಂದರರಾಮ್ ಶೆಟ್ಟಿ ಅವರ ಹೆಸರು ಇಡಲು ಸರಕಾರ ಆದೇಶ ಹೊರಡಿಸಿದ್ದರೂ ಅದನ್ನು ಜೆ.ಆರ್.ಲೋಬೊ ತಡೆದರು. ಆದೇ ರೀತಿಯಲ್ಲಿ ಲೇಡಿಹಿಲ್ ವೃತ್ತಕ್ಕೆ ಶ್ರೀ ನಾರಾಯಣ ಗುರುಗಳ ಹೆಸರನ್ನು ಇಡಲು ತೀರ್ಮಾನಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಪ್ರಯತ್ನ ಸಾಗಿತ್ತು. ಆ ರಸ್ತೆ ನೇರವಾಗಿ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಹೋಗುವ ಮುಖ್ಯ ರಸ್ತೆಯಾಗಿರುವ ಕಾರಣ ಈ ನಿರ್ಧಾರ ಮಾಡಲಾಗಿತ್ತು. ಆದರೆ ಈ ತೀರ್ಮಾನಕ್ಕೂ ಜೆ.ಆರ್.ಲೋಬೊ ಅವರು ಅಡ್ಡಗಾಲು ಹಾಕಿದರು ಎಂದು ಹರಿಕೃಷ್ಣ ಬಂಟ್ವಾಳ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಮಾರ್ನಮಿಕಟ್ಟೆಯಲ್ಲಿನ ವೃತ್ತವನ್ನು ಬಿಲ್ಲವ ಸಮಾಜದ ಯುವಕರೇ ಮುಂದಾಗಿ ನಿಂತು ಹಣ ಖರ್ಚು ಮಾಡಿ ಅದನ್ನು ಕೋಟಿ ಜೆನ್ನಯ್ಯ ವೃತ್ತವೆಂದು ಮಾಡಿದ್ದಾರೆ. ಆದರೆ ಶಾಸಕರು ಅದಕ್ಕೆ 1 ಕೋ.ರೂ. ತನ್ನ ಶಾಸಕ ನಿಧಿಯಿಂದ ವೆಚ್ಚ ಮಾಡಲಾಗಿದೆ ಎಂದು ಸಾಧನೆ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೆ ಒಂದೂ ರೂಪಾಯಿಯನ್ನು ಅವರು ನೀಡಿಲ್ಲ. ಶಾಸಕರ ಹೇಳಿಕೆ ಅಪ್ಪಟ ಸುಳ್ಳು ಎಂದು ಅವರು ಹೇಳಿದರು.
ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಪಡೆಯಲಿದೆ. ಹಾಗಾಗಿ ಮುಂದಿನ ನವರಾತ್ರಿಯೊಳಗೆ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಹೆಸರಿಡಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಸೋಲಿನ ಭೀತಿ ಎಷ್ಟು ಹಬ್ಬಿದೆ ಎಂದರೆ ಪತ್ರಿಕೆಯೊಂದರಲ್ಲಿ ಬಂದಿದೆಯೆನ್ನುವ ಸುಳ್ಳು ಸುದ್ದಿಗಳನ್ನು ಮುದ್ರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಡಲಾಗುತ್ತಿದೆ. ನಾವು ಯಾರೂ ಕೂಡಾ ಕಾಂಗ್ರೆಸ್ ಬೆಂಬಲಿಸುವ ಹೇಳಿಕೆಗಳನ್ನು ನೀಡಿಲ್ಲ . ಜೊತೆಯಲ್ಲಿ ಯಾವುದೇ ಕಾರಣಕ್ಕೆ ಈ ಬಾರಿ ಬಿಲ್ಲವ ಸಮಾಜ ಕಾಂಗ್ರೆಸ್‌ನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಮತದಾರರು, ಮುಖ್ಯವಾಗಿ ಬಿಲ್ಲವ ಬಂಧುಗಳು ಕಾಂಗ್ರೆಸಿನ ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು ಎಂದು ಅವರು ಹೇಳಿದರು.







