ಮತದಾನ ನಮ್ಮ ಹಕ್ಕು: ಪ್ರಜ್ಞಾವಂತರಾಗಿ ಮತದಾನ ಮಾಡಿ
ಮತದಾನ ಜಾಗೃತಿಗಾಗಿ ವಿಶಿಷ್ಠ ಕಲಾಕೃತಿ

ಪಡುಬಿದ್ರೆ, ಮೇ 8: ಪಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿಯಲ್ಲಿ ಮಣಿಪಾಲದ ಮರಳು ಶಿಲ್ಪ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ವೆಂಕಿ ಪಲಿಮಾರು ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶಿಷ್ಠ ಕಲಾಕೃತಿ ರಚಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ಇದೀಗ ಅಸೆಂಬ್ಲಿ ಚುನಾವಣಾ ಕಾವು ಏರುತ್ತಿದ್ದು, ಎಲ್ಲೆಂದರಲ್ಲಿ ಮತದಾರರಿಗೆ ಆಮಿಷವೊಡ್ಡುವ ವಿಷಯಗಳು ದಿನಾ ಸುದ್ದಿಯಾಗುತ್ತಿವೆ. ಇದನ್ನೇ ಮಾನದಂಡವಾಗಿರಿಸಿಕೊಂಡು ಕಲಾವಿದರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಹಣ, ಹೆಂಡ, ಗ್ಯಾಸ್ ಸಿಲಿಂಡರ್, ಸೀರೆ, ಕುಕ್ಕರ್‌ನಂತಹ ವಸ್ತುಗಳ ಆಮಿಷವೊಡ್ಡುವ ಮೂಲಕ ಮತದಾರರ ಮನಗೆಲ್ಲಲು ಹರಸಾಹಸ ಮಾಡುವ ಚಿತ್ರವನ್ನು ಕಲಾಕೃತಿಯಲ್ಲಿ ತೋರಿಸಲಾಗಿದೆ.
ಚುನಾವಣೆ ಸಮಯದಲ್ಲಿ ಮತದಾರ ಪ್ರಭುವನ್ನು ಪ್ರಲೋಭನೆಗೊಳಪಡಿಸುವ ದೃಶ್ಯವನ್ನು ಕಲಾಕೃತಿಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಆವೆಮಣ್ಣು ಹಾಗೂ ವಾಶರ್ ಬಳಿಸಿ ಕಲಾಕೃತಿಯನ್ನು ರಚಿಸಲಾಗಿದೆ. ಮತದಾನ ಮಾಡುವುದು ನಮ್ಮ ಕರ್ತವ್ಯ, ಈ ಹಕ್ಕನ್ನು ಕಳೆದುಕೊಳ್ಳಬೇಡಿ. ನಿಮ್ಮ ಅಮೂಲ್ಯವಾದ ಮತವನ್ನು ಕ್ಷುಲ್ಲಕ ಆಮಿಷಗಳಿಗೆ ಮಾರಿಕೊಳ್ಳಬೇಡಿ. ಪ್ರಜ್ಞಾವಂತರಾಗಿ ಮತದಾನ ಮಾಡಿ ದೇಶದ ಏಳಿಗೆಯಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿ ಎನ್ನುವ ಎಚ್ಚರಿಕೆಯನ್ನು ಸಾರುವ ಮೂಲಕ ಮತದಾರರನ್ನು ಜಾಗೃತಿಗೊಳಿಸಿದ್ದಾರೆ.
ಮರಳು ಶಿಲ್ಪ ಕಲಾವಿದ ಶ್ರೀನಾಥ್ ಮಣಿಪಾಲ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆ-2018ರ ಸಲುವಾಗಿ ಮಿಶ್ರ ಮಾಧ್ಯಮದಲ್ಲಿ ಮತದಾನ ಜಾಗೃತಿ ವಿಶಿಷ್ಟ ಶಿಲ್ಪವನ್ನು ರಚಿಸಲಾಗಿದೆ. ಪಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಯನ್ನು ಅನಾವರಣಗೊಳಿಸಲಾಗಿದೆ. ಚುನಾವಣೆಗೂ ಮುನ್ನ ಈ ಕಲಾಕೃತಿಯನ್ನು ಜಿಲ್ಲೆಯಾದ್ಯಾಂತ ಹಾಗೂ ಕರಾವಳಿಯ ಕಡಲ ಕಿನಾರೆಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರು ಮೇ 12 ರಂದು ತಪ್ಪದೇ ಮತದಾನ ಮಾಡಿ ಎನ್ನುತ್ತಾರೆ.







