ಬಿಜೆಪಿಯ ನಕಲಿ ಹಿಂದುತ್ವದ ವಿರುದ್ಧ ನನ್ನ ಸ್ಪರ್ಧೆ: ಪಕ್ಷೇತರ ಅಭ್ಯರ್ಥಿ ಚೇತನ್
ಪುತ್ತೂರು, ಮೇ 8: ಬಿಜೆಪಿ ತನ್ನದು ಹಿಂದುತ್ವ ನೀತಿ ಎಂದು ಹೇಳಿಕೊಳ್ಳುತ್ತಾ ತನ್ನ ನಕಲಿ ಹಿಂದುತ್ವದಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ನೈಜ ಹಿಂದುತ್ವ ಇದರಿಂದ ನಾಶವಾಗುವ ಭೀತಿ ಇದೆ. ಇದರ ವಿರುದ್ಧ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚೇತನ್ ಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಸೀಟು ಹಂಚಿಕೆ ಮಾಡಿರುವ ಬಿಜೆಪಿ ಮತ್ತೊಂದು ಕಡೆ ನಾವು ಹಿಂದೂಗಳ ಪರ ಎಂದು ಹೇಳಿಕೊಳ್ಳುತ್ತಿದೆ. ಮುಸ್ಲಿಮರನ್ನು ತೋರಿಸಿ ಹಿಂದೂಗಳ ಮನಸ್ಸಲ್ಲಿ ಭಯ ಹುಟ್ಟಿಸಿ, ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಲು ಯತ್ನಿಸುತ್ತದೆ. ಹಿಂದೂಗಳ ಮೇಲೆ ಹಿಂದೂಗಳಿಂದಲೇ ದೌರ್ಜನ್ಯ ನಡೆದರೆ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಪುತ್ತೂರಿನಲ್ಲಿ 2007ರಲ್ಲಿ ಸಾರ್ವಜನಿಕ ಶನಿಪೂಜೆ ಪೂಜೆ ಮಾಡಿದವರ ಮೇಲೆ ಲಾಠಿಚಾರ್ಜ್ ಮಾಡಿಸಿದವರು ಇದೇ ಬಿಜೆಪಿಯವರು. ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕೀಯ ಇರಬಾರದು. ನಾನು ಕೂಡ ಹಿಂದುತ್ವದ ಪ್ರತಿಪಾದಕ. ಆದರೆ ಬಿಜೆಪಿ ಹೇಳುವ ರಾಜಕೀಯ ಹಿಂದುತ್ವಕ್ಕೆ ನನ್ನ ಬೆಂಬಲವಿಲ್ಲ. ಇದರ ವಿರುದ್ಧ ನನ್ನ ಸ್ಪರ್ಧೆ ಎಂದರು.
2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಸುದತ್ತ ಜೈನ್ ಶಿರ್ತಾಡಿ ಮಾತನಾಡಿ ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುತ್ತಿದೆ. ಆಹಾರ ಭದ್ರತೆ ಸೇರಿದಂತೆ ಎಲ್ಲಾ ಭದ್ರತೆಗಳು ಸಂವಿಧಾನದತ್ತ ಹಕ್ಕಾಗಿದೆ. ಸಮಾಜಕ್ಕೆ ಅತೀ ಅಗತ್ಯವಾಗಿ ವಿಚಾರ, ಆರೋಗ್ಯ ಮತ್ತು ಉದ್ಯೋಗದ ಭದ್ರತೆ ಬೇಕಾಗಿದೆ. ಬಡವರ ಮತ್ತು ದಲಿತರ ಹಕ್ಕನ್ನು ಉಳಿಸಿಕೊಳ್ಳುವ ದಲಿತ ಸಂವಿಧಾನ ಸಮರ್ಪಕವಾಗಿ ಜಾರಿಯಾಗಬೇಕು ಎಂದ ಅವರು ಎತ್ತಿನ ಹೊಳೆ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಕ್ರಮ ಸಂಬಂಧಗಳ ಕೂಸು. ಈ ಬಗ್ಗೆ ಮತದಾರರು ಜಾಗೃತಾಗಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಚಳುವಳಿಗಳಲ್ಲಿ ಭಾಗಿಯಾದವನು ನಾನು. ಕಾಂಗ್ರೆಸ್ ಮತ್ತು ಬಿಜೆಪಿಗಳು ತತ್ವಾದರ್ಶಗಳನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿವೆ. ಇದರ ವಿರುದ್ಧ ನಾನು ಜಾಗೃತಿ ಮೂಡಿಸುತ್ತಿದ್ದೇನೆ. ಪುತ್ತೂರಿನಲ್ಲಿ ಚೇತನ್ ಕುಮಾರ್ ಅವರಿಗೆ ಬೆಂಬಲ ನೀಡಿದ್ದು, ಅವರನ್ನು ಮತದಾರ ಬೆಂಬಲಿಸಬೇಕೆಂದು ವಿನಂತಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ 60 ವರ್ಷ ದಾಟಿದವರು ಸ್ಪರ್ಧಿಸುತ್ತಿದ್ದಾರೆ. ನಿರಂತರ ನಾನೇ ಸ್ಪರ್ಧಿಸಬೇಕೆಂದು ಬಯಸುವ ರಾಜಕಾರಣಿಗಳು ಹೊಸ ನಾಯಕತ್ವ ಬೆಳೆಸುವುದಿಲ್ಲ. ಇದನ್ನು ನಾನು ವಿರೋಧಿಸುತ್ತಿದ್ದು, ಬದಲಾವಣೆಗಾಗಿ ವಿನಂತಿಸುತ್ತಿದ್ದೇವೆ. ಒಮ್ಮೆ ಗೆದ್ದು ಐದು ವರ್ಷ ಸೇವೆ ಸಲ್ಲಿಸಿದವರು ನಂತರ ಬದಿಗೆ ಸರಿಯಬೇಕು. ಯುವಕರಿಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಚೇತನ್ ಕುಮಾರ್ ಬೆಂಬಲಿಗರಾದ ಶೋಭಾ, ಕೃಷ್ಣಪ್ಪ ಶಿವನಗರ ಉಪಸ್ಥಿತರಿದ್ದರು.







