ಕಾಂಗ್ರೆಸ್ ‘ತ್ರಿವಳಿ’ಗಳಿಂದ ಬೆಂಗಳೂರಿನ ಮಾನ ಹರಾಜು: ನರೇಂದ್ರ ಮೋದಿ

ಬೆಂಗಳೂರು, ಮೇ 8: ರಾಜ್ಯದ ಮುಖ್ಯಮಂತ್ರಿಗೆ ಬೆಂಗಳೂರಿನ ಮೇಲೆ ಯಾಕಿಷ್ಟು ಕೋಪ ಎಂದು ಗೊತ್ತಾಗುತ್ತಿಲ್ಲ. ಜಗತ್ತಿನಲ್ಲಿ ಕೀರ್ತಿ ಗಳಿಸಿದ ಬೆಂಗಳೂರು ನಗರ ಈ ಕಾಂಗ್ರೆಸ್ ತ್ರಿವಳಿಗಳ ಕೈಗೆ ಸಿಕ್ಕಿ ಬಲಿಪಶುವಾಗಿದೆ. ಲೂಟಿ ಹೊಡೆಯುವುದರಲ್ಲಿ ಒಬ್ಬರಿಗಿಂತ ಒಬ್ಬರು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದಾರೆ.
ಮಂಗಳವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಬ್ಬರು ಈ ಹಿಂದೆ ಗೃಹ ಮಂತ್ರಿಯಾಗಿದ್ದರು, ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರ ನಿಗೂಢ ಸಾವು ಪ್ರಕರಣದ ಮೊದಲ ಆರೋಪಿ. ಇನ್ನೊಬ್ಬರು ಭೂ ಮಾಫಿಯಾದಲ್ಲಿ ನಿಸ್ಸೀಮರು. ಗಲ್ಫ್ ರಾಷ್ಟ್ರಗಳಲ್ಲಿ ಇವರ ಎಷ್ಟು ವ್ಯವಹಾರವಿದೆ ಗೊತ್ತಿದೆಯೇ? ಜೈಲಿನಲ್ಲಿರಬೇಕಾದವರೂ ಸರಕಾರದಲ್ಲಿದ್ದಾರೆ ಎಂದರು.
ಮೂರನೆಯವರು ಒಬ್ಬ ಶಾಸಕ. ಇವರ ಕ್ಷೇತ್ರದಲ್ಲಿ ಶಾಂತಿ ಹೊರತುಪಡಿಸಿ ಮಿಕ್ಕಿದ್ದು ಎಲ್ಲ ಇದೆ. ಇವರ ಮಗ ಅಧಿಕಾರದ ಮದದಿಂದ ಜನಸಾಮಾನ್ಯರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಮೋದಿ ಪ್ರಶ್ನಿಸಿದರು.
ರಾಜ್ಯದ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಪುದುಚೇರಿ, ಪಂಜಾಬ್ ಹಾಗೂ ಪರಿವಾರಕ್ಕೆ ಸೀಮಿತವಾಗಲಿದೆ. ಕಾಂಗ್ರೆಸ್ ಸರಕಾರವು ಬೆಂಗಳೂರಿನ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಕೈ ಬಿಟ್ಟಿಲ್ಲ. ರಾಜಕೀಯ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಹಗಲಿನಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ. ಸ್ವಲ್ಪ ಮಳೆಯಾದರೂ ಬೆಂಗಳೂರು ಮುಳುಗುತ್ತದೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ, ಸಂಚಾರ ದಟ್ಟಣೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಪಾಲಿಗೆ ಒಂದು ತ್ರಿವಳಿಯಾದರೆ, ರಾಜ್ಯ ಮಟ್ಟದಲ್ಲಿ ಮತ್ತೊಂದು ತ್ರಿವಳಿಯಿದೆ ಅದುವೇ ‘ವಿಎಸ್‌ಎಂ’. ಇಡೀ ದೇಶದ ಕಾಂಗ್ರೆಸ್ ನಾಯಕರಿಗಾಗಿ ಇದು ಎಟಿಎಂ ಆಗಿ ಕೆಲಸ ಮಾಡುತ್ತಿದೆ ಎಂದು ನರೇಂದ್ರಮೋದಿ ಆರೋಪಿಸಿದರು.
ಲೋಕಾಯುಕ್ತವನ್ನು ದುರ್ಬಲಗೊಳಿಸಿದರು, ಲೋಕಾಯುಕ್ತರ ಮೇಲೆ ಅವರ ಕಚೇರಿಯಲ್ಲೆ ಹಲ್ಲೆ ನಡೆಯುತ್ತಿದೆ. ಎಸಿಬಿ ನಾಮಕಾವಸ್ತೆಯಾಗಿದೆ. ಕಾಂಗ್ರೆಸ್ಸಿಗರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮುಖ್ಯಮಂತ್ರಿ ಕ್ಲೀನ್‌ಚಿಟ್ ನೀಡುತ್ತಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರಕಾರವು ಐದು ವರ್ಷಗಳಲ್ಲಿ ಮಾಡಿರುವ ದೊಡ್ಡ ಪ್ರಮಾದಗಳೇನೆಂದರೆ ದಿಲ್ಲಿಯಲ್ಲಿರುವ ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವುದು, ಭ್ರಷ್ಟ ಸರಕಾರ, ಅಪರಾಧಗಳು ಹಾಗೂ ಅತ್ಯಾಚಾರ, ರೈತರ ಸಮಸ್ಯೆಗಳ ಕಡೆಗಣನೆ, ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸಿರುವುದು ಎಂದು ಮೋದಿ ದೂರಿದರು. ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ, ಕಾಂಗ್ರೆಸ್ ಸರಕಾರವು ಕಲ್ಪನಾ ಜಗತ್ತಿನಲ್ಲಿ ತೇಲುತ್ತಿದ್ದು, ಚುನಾವಣಾ ಪ್ರಣಾಳಿಕೆ ಹೆಸರಿನಲ್ಲಿ ಒಂದು ಮಹಾಕಾವ್ಯ ರಚಿಸಿದ್ದಾರೆ. ಅದರ ಪ್ರತಿಯೊಂದು ಪುಟ, ವಾಕ್ಯ ಹಾಗೂ ವ್ಯಾಕರಣದಲ್ಲಿ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಆದರೆ, ನಾವು ಮಹಾಕಾವ್ಯ ರಚಿಸುವುದಿಲ್ಲ. ಜನತೆಯ ಬದುಕಿನಲ್ಲಿ ಕಾಲಮಿತಿಯಲ್ಲಿ ಬದಲಾವಣೆ ತರುವ ವಚನಗಳನ್ನು ನೀಡಿದ್ದೇವೆ. ನಮ್ಮ ಮೊದಲ ವಚನ ಕರ್ನಾಟಕದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು. ರೈತರ ಹೊಲಗಳಿಗೆ ನೀರು ಪೂರೈಸುವುದು, ಅವರು ಬೆಳೆಯುವಂತಹ ಬೆಳೆಗಳಿಗೆ ಯೋಗ್ಯ ಬೆಲೆ ಕೊಡಿಸುವುದು ಎಂದು ಅವರು ಹೇಳಿದರು.
ಇದಲ್ಲದೆ, ಆಧುನಿಕ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಕಲ್ಪಿಸುವುದು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಉದ್ಯಮಿಗಳಿಗೆ ಪ್ರಾಮಾಣಿಕವಾಗಿ ವ್ಯವಹಾರ ನಡೆಸುವ ವಾತಾವರಣ ನಿರ್ಮಿಸುವುದು, ಮಹಿಳೆಯರಿಗೆ ರಕ್ಷಣೆ ನೀಡುವುದು. ಮೇ 15ರ ನಂತರ ನಡೆಯುವ ಬಿಜೆಪಿ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಭರವಸೆಗಳನ್ನು ಈಡೇರಿಸುವ ನೀಲನಕ್ಷೆ ಸಿದ್ಧವಾಗಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಕೆರೆಗಳ ಜೀರ್ಣೋದ್ಧಾರಕ್ಕಾಗಿ 2500 ಕೋಟಿ ರೂ.ಗಳ ನಾಡಪ್ರಭು ಕೆಂಪೇಗೌಡ ವಿಶೇಷ ನಿಧಿ ಸ್ಥಾಪನೆ, ಬೆಂಗಳೂರನ್ನು ಕಸ ರಹಿತ ನಗರವನ್ನಾಗಿಸಲು ಕ್ರಮ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ರಕ್ಷಣಾ ಪಡೆ ರಚಿಸಲಾಗುವುದು ಎಂದು ನರೇಂದ್ರಮೋದಿ ಹೇಳಿದರು.
ದೇಶದಲ್ಲಿ 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೇವಲ ನಾಲ್ಕು ವರ್ಷಗಳಲ್ಲಿ ಆಗಿದೆ. ನಾವು ವಿಮಾನಯಾನ ನೀತಿ ರೂಪಿಸಿದ ಫಲ ಈಗ ಕಾಣುತ್ತಿದೆ. ಸಾಮಾನ್ಯ ನಾಗರಿಕನು ವಿಮಾನದಲ್ಲಿ ಪ್ರಯಾಣ ಮಾಡುವಂತಾಗಿದೆ. ದೇಶದ ರೈಲುಗಳಲ್ಲಿನ ಎಸಿ ಕೋಚ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗಿಂತ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿ ಸಂಚರಿಸಿದ್ದಾರೆ ಎಂದು ಅವರು ತಿಳಿಸಿದರು.
ನಾಲ್ಕು ವರ್ಷಗಳಲ್ಲಿ 900 ವಿಮಾನಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ದೇಶದ ನೂರು ನಗರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 31 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಸಿದ್ದೇವೆ. ಒಂದು ವರ್ಷದಲ್ಲಿ ಶಾಲೆಗಳಲ್ಲಿ ಲಕ್ಷಾಂತರ ಶೌಚಾಲಯ ನಿರ್ಮಿಸಿದ್ದೇವೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಬೆಂಗಳೂರು ನಗರದ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.







