ಕೆಟ್ಟ ರಸ್ತೆಗಳ ಬಗ್ಗೆ ಮಾತನಾಡಿದ ನಿವೃತ್ತ ಶಿಕ್ಷಕರನ್ನು ಅರ್ಧದಲ್ಲೇ ತಡೆದ ಕೇಂದ್ರ ಸಚಿವ

ನಗೌನ್ (ಅಸ್ಸಾಂ), ಮೇ.8: ನಿವೃತ್ತ ಶಿಕ್ಷಕರೊಬ್ಬರು ತಮ್ಮ ಪ್ರದೇಶದಲ್ಲಿರುವ ಕೆಟ್ಟ ರಸ್ತೆಗಳ ಪಟ್ಟಿಯನ್ನು ಹೇಳುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಕೇಂದ್ರ ಸಚಿವರು ಶಿಕ್ಷಕರನ್ನು ಅರ್ಧದಲ್ಲೇ ತಡೆದ ಘಟನೆ ಅಸ್ಸಾಂನ ನಗೌನ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ವೇಳೆ ನಡೆದಿದೆ.
ಕಾರ್ಯಕ್ರಮದ ವಿಷಯದ ಬಗ್ಗೆ ಕೆಲವು ಅಧಿಕಾರಿಗಳು ಮಾತನಾಡಿದ ನಂತರ ನಿವೃತ್ತ ಶಿಕ್ಷಕರ ಸರದಿ ಬಂದಾಗ ಅವರು ವೇದಿಕೆ ಏರಿ ಮಾತನಾಡಲು ಆರಂಭಿಸಿದ್ದರು. ರಸ್ತೆಗಳನ್ನು ಸರಿಪಡಿಸುವಂತೆ ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದುಃಖ ತೋಡಿಕೊಂಡರು. ಹಲವು ವರ್ಷಗಳಿಂದ ಅಮೊಲಪಟ್ಟಿಯ ಬಿಸಿ ರಸ್ತೆಯ ನಿವಾಸಿಗಳು ಇಲ್ಲಿನ ರಸ್ತೆಗಳ ಕೆಟ್ಟ ಸ್ಥಿತಿಯಿಂದಾಗಿ ಪರದಾಡುವಂತಾಗಿದೆ. ಆದರೆ ನಮಗೆ ಈಗಲೂ ನೂತನ ಸರಕಾರ ಮತ್ತು ನೂತನ ಶಾಸಕರ ಮೇಲೆ ನಂಬಿಕೆಯಿದೆ. ಅವರು ಖಂಡಿತವಾಗಿಯೂ ರಸ್ತೆಗಳನ್ನು ದುರಸ್ತಿಗೊಳಿಸುತ್ತಾರೆ ಎಂದು ನಿವೃತ್ತ ಶಿಕ್ಷಕರು ಭರವಸೆ ವ್ಯಕ್ತಪಡಿಸಿದ್ದರು. ಹಲವು ಸಲಯದಿಂದ ನಾನು ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಶಿಕ್ಷಕರು ತಿಳಿಸುತ್ತಿದ್ದಂತೆ ರೈಲ್ವೇ ಸಹಾಯಕ ಸಚಿವ ರಜೆನ್ ಗೊಹೇನ್ ತಮ್ಮ ಕುರ್ಚಿಯಿಂದ ಎದ್ದುಬಂದು ಶಿಕ್ಷಕರು ಮಾತನಾಡುತ್ತಿದ್ದ ಮೈಕ್‌ಗೆ ತಮ್ಮ ಕೈಯನ್ನು ಅಡ್ಡವಿಟ್ಟು ತಡೆದರು. ನೀವು ಈ ವಿಷಯವನ್ನು ಸಂಬಂಧಿತ ಅಧಿಕಾರಿಗಳ ಜೊತೆ ಯಾಕೆ ಚರ್ಚಿಸುವುದಿಲ್ಲ? ನೀವು ಇಲ್ಲಿಗೆ ಯಾವುದೋ ಉದ್ದೇಶದಿಂದ ಆಗಮಿಸಿದ್ದೀರಿ ಎಂದು ಗೊಹೇನ್ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿವೃತ್ತ ಶಿಕ್ಷಕರು ಗೊಹೇನ್ ಪ್ರಶ್ನೆಗೆ ಉತ್ತರಿಸಲು ಮುಂದಾದರೂ ಸಚಿವರು ಮಾತ್ರ ಮೈಕ್ ನೀಡದೆ ಶಿಕ್ಷಕರ ಮಾತಿಗೆ ಅವಕಾಶ ನೀಡಲಿಲ್ಲ. ಜೊತೆಗೆ ಸಮಸ್ಯೆಗಳು ಭಾಷಣ ಮಾಡುವುದರಿಂದ ಪರಿಹಾರವಾಗುವುದಿಲ್ಲ ಎಂಬ ಪುಕ್ಕಟೆ ಸಲಹೆಯನ್ನೂ ನೀಡಿದ್ದಾರೆ.





