ಕಡಬ: ಮರ ಬಿದ್ದು ಕಾರು ಜಖಂ

ಕಡಬ, ಮೇ 8: ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸ್ವಿಫ್ಟ್ ಕಾರು ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದಾಗ ನೆಟ್ಟಣ ಡಿಪೋ ಬಳಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಘಟನೆಯಲ್ಲಿ ಕಾರು ಚಾಲಕ ಗಾಯಗೊಂಡು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮರ್ಧಾಳದಿಂದ ಕೈಕಂಬವರೆಗೆ ರಸ್ತೆ ಬದಿಯಲ್ಲಿ ಹಾಲುಮಡ್ಡಿ ಮರಗಳನ್ನು ಕೊರೆದು ಎಣ್ಣೆ ತೆಗೆದು ಹಾಗೆಯೇ ಬಿಡುತ್ತಿರುವುದರಿಂದ ಈ ಘಟನೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ವರ್ಷ ಕಲ್ಲಾಜೆ ಎಂಬಲ್ಲಿ ಹಾಲು ಮಡ್ಡಿ ಮರವೊಂದು ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಪರಿಣಾಮ ಚಲಿಸುತ್ತಿದ್ದ ಬೈಕಿನ ಮೇಲೆ ವಿದ್ಯುತ್ ಕಂಬ ಬಿದ್ದು ಹಿಂಬದಿ ಸವಾರ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದ.
ಹಾಲು ಮಡ್ಡಿ ಮರಗಳಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದ್ದು, ರಸ್ತೆ ಬದಿಯಲ್ಲಿರುವ ಉಳಿದ ಮರಗಳನ್ನು ತೆರವುಗೊಳಿಸದೆ ಇದ್ದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಸಂಭವವಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





