ಮದರಸ ಚಳವಳಿಯ ನಾಯಕ ನೆಕ್ಕಿಲಾಡಿ ಉಸ್ತಾದ್ ನಿಧನ

ಬಂಟ್ವಾಳ, ಮೇ 8: ಕರ್ನಾಟಕದ ಸುನ್ನೀ ಮದರಸ ಪ್ರಸ್ಥಾನದ ಮುಂಚೂಣಿ ನಾಯಕ, ಹಿರಿಯ ವಿದ್ವಾಂಸ, ನೆಕ್ಕಿಲಾಡಿ ಉಸ್ತಾದ್ ಎಂದೇ ಪ್ರಖ್ಯಾತರಾಗಿದ್ದ ಇಸ್ಮಾಯೀಲ್ ಮುಸ್ಲಿಯಾರ್ (68) ಅವರು ಮಂಗಳವಾರ ರಾಮಲ್‌ಕಟ್ಟೆಯ ಅರಬನಗುಡ್ಡೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗ, ಸ್ನೇಹಿತರನ್ನು ಅಗಲಿದ್ದಾರೆ. ನೆಕ್ಕಿಲಾಡಿ ಅವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.
ನೆಕ್ಕಿಲಾಡಿ ಉಸ್ತಾದ್ ಅವರು ಮೂಲತಃ ರಾಮಲ್‌ಕಟ್ಟೆಯ ಅರಬನಗುಡ್ಡೆ ನಿವಾಸಿಯಾಗಿದ್ದು, ಇಲ್ಲಿಯೇ ಮನೆ ನಿರ್ಮಿಸಿ ವಾಸವಾಗಿದ್ದರು. ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಆಗಿರುವ ಇವರು, ಕಳೆದ 9 ವರ್ಷಗಳಿಂದ ಉಮರುಲ್ ಫಾರೂಕ್ ಜುಮಾ ಮಸೀದಿ ನೆಕ್ಕಿಲಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ರಾಜ್ಯದಾದ್ಯಂತ ಮದ್ರಸ ಅಂಗೀಕಾರ ಸೇರಿದಂತೆ ಸಮಾಜದಲ್ಲಿ ಇಸ್ಲಾಮೀ ಶಿಕ್ಷಣದ ಕ್ರಾಂತಿಯನ್ನು ಸೃಷ್ಟಿಸಿದ ಇವರು, ಸುಪ್ರಸಿದ್ಧ ವಾಗ್ಮಿಯೂ ಆಗಿದ್ದರು. ಮಯ್ಯತ್ ಪರಿಪಾಲನೆ ಹಾಗೂ ಇನ್ನಿತರ ಧಾರ್ಮಿಕ ವಿಚಾರಗಳ ಬಗ್ಗೆ ಇನ್ನೊಬ್ಬರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡುತ್ತಿದ್ದರು.
ಬ್ಯಾರಿ ಭಾಷೆಯಲ್ಲಿ ತನ್ನದೇ ಶೈಲಿಯಲ್ಲಿ ಮತಪ್ರವಚನದ ಮೂಲಕ ಪ್ರಖ್ಯಾತಿ ಪಡೆದಿದ್ದ ಉಸ್ತಾದ್, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಎಸ್‌ಇಡಿಸಿ, ಜಂಇಯ್ಯತ್ತುಲ್ ಮುಫತ್ತಿಶೀನ್ ಸೇರಿದಂತೆ ಹಲವಾರು ಸಂಸ್ಥೆಗಳ ಸಾರಥ್ಯವಹಿಸಿದ್ದರು. ಇವರ ಜನಾಝವನ್ನು ವಳವೂರು ಜುಮಾ ಮಸೀದಿಯ ವಠಾರದಲ್ಲಿ ದಫನ ಮಾಡಲಾಯಿತು. ನೆಕ್ಕಿಲಾಡಿ ಉಸ್ತಾದ್ ಅವರ ಅಕಾಲಿಕ ಮರಣಕ್ಕೆ ಹಿರಿಯ ಧಾರ್ಮಿಕ ಮುಖಂಡರು ಸಂತಾಪ ಸೂಚಿಸಿದ್ದಾರೆ.







