ಲೋಕ ಜನಶಕ್ತಿ ಪಕ್ಷದಿಂದ ಬಿಜೆಪಿಗೆ ಬೆಂಬಲ: ರಾಮ್‌ವಿಲಾಸ್ ಪಾಸ್ವಾನ್
.jpg)
ಬೆಂಗಳೂರು, ಮೇ 8: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷವು ಬಿಜೆಪಿಯನ್ನು ಬೆಂಬಲಿಸಲಿದೆ. ಹಾಗೂ ಬಿಜೆಪಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲಿದೆ ಎಂದು ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಮಂಗಳವಾರ ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ ನಂತರದಲ್ಲಿ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ದಲಿತರ ಏಳಿಗೆಗಾಗಿ ಸಕಾರಾತ್ಮಕ ಕಾರ್ಯಕ್ರಮಗಳೇನು ಹಾಕಿಕೊಂಡಿಲ್ಲ. ಕೇವಲ ತಮ್ಮ ಮತ ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನವನ್ನು ದಲಿತರೊಬ್ಬರಿಗೆ ನೀಡುವ ಮೂಲಕ ದಲಿತ ಪರ ಸರಕಾರವೆಂದು ಸಾಬೀತು ಪಡಿಸಿದ್ದಾರೆ. ಲಂಡನ್‌ನಲ್ಲಿ ಅಂಬೇಡ್ಕರ್ ಉಳಿದುಕೊಂಡಿದ್ದ ಮನೆಯನ್ನು ಕೊಂಡು ಮ್ಯೂಸಿಯಂ ಆಗಿ ಬದಲಿಸಿದ್ದಾರೆ. ಹೀಗೆ ಕೇಂದ್ರ ಸರಕಾರ ಅಂಬೇಡ್ಕರ್ ಪರವಾದ ಚಿಂತನೆಗಳನ್ನು ಆಡಳಿತದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮರು ಪರಿಶೀಲನಾ ಅರ್ಜಿ: ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕುರಿತು ವಿವಾದವೆದ್ದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು. ಯಾವುದೆ ಕಾರಣಕ್ಕೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಬದಲಿಸಲು ಬಿಡುವುದಿಲ್ಲವೆಂದು ಅವರು ಹೇಳಿದರು. ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಚಿ.ನಾ.ರಾಮು, ಲೋಕ ಜನಶಕ್ತಿಯ ಪಕ್ಷದ ರಾಜ್ಯಾಧ್ಯಕ್ಷ ಜಗದೀಶ್ ಮುತ್ತಿತರರಿದ್ದರು.







