ಅಪಘಾತ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಶಿಕ್ಷೆ
ಉಡುಪಿ, ಮೇ 8: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಕೆಎಸ್‌ಆರ್ ಟಿಸಿ ಬಸ್ ಚಾಲಕನಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೆಎಸ್‌ಆರ್‌ಟಿಸಿ ಅಲ್ಟ್ರಾ ಡಿಲಕ್ಸ್ ಬಸ್ ಚಾಲಕ ಕೆ.ನಾರಾಯಣ ಶಿಕ್ಷೆ ಗುರಿ ಯಾದ ಆರೋಪಿ. 2013ರ ಫೆ.16ರಂದು ರಾತ್ರಿ 8:30ರ ಸುಮಾರಿಗೆ ಸಂತೆ ಕಟ್ಟೆಯಿಂದ ಉಡುಪಿ ಕಡೆ ಬರುತ್ತಿದ್ದ ಬಸ್, ನಿಟ್ಟೂರು ಸ್ಟೇಟ್ ಹೋಮ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತಿದ್ದ ಬಾಗಲಕೋಟೆಯ ಲಾಲ್ ಸಾಬ್ ಎಂಬವರಿಗೆ ಢಿಕ್ಕಿ ಹೊಡೆದು, ತೀವ್ರವಾಗಿ ಗಾಯಗೊಂಡ ಗಾಯಾಳನ್ನು ಆಸ್ವತ್ರೆಗೆ ದಾಖಲಿಸದೆ ಪೋಲಿಸರಿಗೆ ಮಾಹಿತಿಯನ್ನು ನೀಡದೆ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದರು.
ಈ ಬಗ್ಗೆ ಆಗಿನ ಉಡುಪಿ ವೃತ್ತ ನಿರೀಕ್ಷಕ ಮಹಾದೇವಪ್ಪ ಡಿಡ್ಡಿಮನಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ 2500ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರ ಪರವಾಗಿ ಸಹಾಯಕ ಸರಕಾರಿ ಅಭಿ ಯೋಜಕಿ ಮಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.





