ಎಸೆಸೆಲ್ಸಿಯಲ್ಲಿ ಶೇ.99.04 ಅಂಕ ಪಡೆದ ನಜ್ಮಾ
"ಆಸಕ್ತಿಯಿಂದ ಅಧ್ಯಯನ ಮಾಡಿರುವುದು ಯಶಸ್ಸಿಗೆ ಕಾರಣ"

ಹುಬ್ಬಳ್ಳಿ, ಮೇ 8: ಆಟ ಮತ್ತು ಪಾಠ ಎರಡರಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿರುವ ಹುಬ್ಬಳ್ಳಿಯ ಎನ್.ಕೆ.ಟಕ್ಕರ್ ಹೈಸ್ಕೂಲ್‌ನ ವಿದ್ಯಾರ್ಥಿನಿ ನಜ್ಮಾ ಕಮ್ಮಾರ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 619 ಅಂಕ ಗಳಿಸಿ ಶೇ.99.04ರ ಸಾಧನೆಯೊಂದಿಗೆ ಜಿಲ್ಲೆಯಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ.
ಆದರೆ ತಾನು ಇದಕ್ಕಿಂತ ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ. ಗಣಿತ, ವಿಜ್ಞಾನ ಮತ್ತು ಸಮಾಜದಲ್ಲಿ 100ಕ್ಕೆ 100 ಅಂಕ ಗಳಿಸಿದ್ದರೂ ಭಾಷಾ ಪರೀಕ್ಷೆಯಲ್ಲಿ ಕಡಿಮೆ ಅಂಕ ದೊರೆತಿದೆ. ಆದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಾಗಿ ನಜ್ಮಾ ಹೇಳಿದ್ದಾರೆ.
ಡಾ. ಎಸ್.ಎಫ್. ಕಮ್ಮಾರ್ ಅವರ ಪುತ್ರಿಯಾಗಿರುವ ನಜ್ಮಾ ಗೆ ವೈದ್ಯೆಯಾಗಬೇಕೆಂಬ ಬಯಕೆಯಿದೆ. ಓದಿನ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿಯಿದ್ದ ನಜ್ಮಾ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಅಬಾಕಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಆಸಕ್ತಿಯಿಂದ ಅಧ್ಯಯನ ಮಾಡಿದರೆ ಯಾರು ಕೂಡಾ ಟಾಪರ್ ಆಗಬಹುದು ಎನ್ನುವ ನಜ್ಮಾ, ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ 2,500 ವಿದ್ಯಾರ್ಥಿಗಳ ಪೈಕಿ ಎರಡನೇ ರ್ಯಾಂಕ್ ಗಳಿಸಿ ಪಿಯುಸಿಗೆ ಉಚಿತ ಪ್ರವೇಶಾವಕಾಶ ಗಳಿಸಿದ ಸಾಧನೆ ತೋರಿದ್ದಾರೆ.







