'ಚಿದಂಬರಂ ಬಗ್ಗೆ ಬಿಜೆಪಿಗರು ಬಾಯ್ಬಿಟ್ಟರೆ ಕಾಂಗ್ರೆಸ್ ಸರ್ವನಾಶ'
ಸಭೆಯಿಂದ ಹೊರನಡೆದ ಡಿಸಿಸಿ ಅಧ್ಯಕ್ಷರ ಕಾರ್ಯವೈಖರಿಗೆ ಪೂಜಾರಿ ಆಕ್ರೋಶ

ಮಂಗಳೂರು, ಮೇ 9: ಮಾಜಿ ಕೇಂದ್ರ ಸಚಿವ ಚಿದಂಬರಂ ಬಗ್ಗೆ ಬಿಜೆಪಿಗರು ಬಾಯ್ಬಿಟ್ಟರೆ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಪಕ್ಷದ ಜಿಲ್ಲಾ ಉಸ್ತುವಾರಿಯೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಎದ್ದು ಹೋದುದನ್ನು ಕಂಡು ಸಿಡಿಮಿಡಿಗೊಂಡ ಪೂಜಾರಿ, ಚಿದಂಬರಂ ಏನೂಂತ ನನಗೆ ಚೆನ್ನಾಗಿ ಗೊತ್ತು. ಅವರ ಬಗ್ಗೆ ಬಿಜೆಪಿಗರು ಬಾಯ್ಬಿಟ್ಟರೆ ಕಾಂಗ್ರೆಸ್ ಸರ್ವನಾಶ ಆಗಲಿದೆ. ನಿಮಗೆಲ್ಲಾ ಈ ನಾಯಕರನ್ನು ಮೆಚ್ಚಿಸಲು ಅವರ ಹಿಂದೆ ತಿರುಗಾಡುವುದೇ ಆಯಿತು. ನಾನೇನು ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದದ್ದಾ ? ಎಂದು ಆಕ್ರೋಶಿತರಾದರು.
ಇದೇ ಚಿದಂಬರಂ ನನ್ನನ್ನು ಹುಡುಕಿಕೊಂಡು ಸರ್ಕ್ಯೂಟ್ ಹೌಸ್‌ವರೆಗೂ ಬಂದಿದ್ದರು. ಅದೆಲ್ಲಾ ನಿಮಗೆ ಗೊತ್ತಾ? ಎಂದು ಪೂಜಾರಿ ಪ್ರಶ್ನಿಸಿದರು.
Next Story





