ಮೋದಿ ವಿದೇಶ ಪ್ರವಾಸದ ಖರ್ಚುಗಳ ಸಂಪೂರ್ಣ ಮಾಹಿತಿ ನೀಡಿ: ಏರ್ ಇಂಡಿಯಾಗೆ ಮುಖ್ಯ ಮಾಹಿತಿ ಆಯೋಗದ ಆದೇಶ

ಹೊಸದಿಲ್ಲಿ, ಮೇ 9: ಪ್ರಧಾನಿ ನರೇಂದ್ರ ಮೋದಿಯ ವಿದೇಶ ಪ್ರವಾಸಗಳಿಗೆ ಸಂಬಂಧಿಸಿದ ಬಿಲ್ ಗಳ ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸುವಂತೆ ಮುಖ್ಯ ಮಾಹಿತಿ ಆಯೋಗ ಏರ್ ಇಂಡಿಯಾಗೆ ಆದೇಶಿಸಿದೆ. ಪ್ರಧಾನಿಯ ವಿದೇಶ ಪ್ರವಾಸಗಳಿಗೆ ಸಾರ್ವಜನಿಕ ಹಣವನ್ನು ಉಪಯೋಗಿಸಲಾಗುತ್ತಿರುವುದರಿಂದ ಗೌಪ್ಯತೆಯ ನೆಪದಲ್ಲಿ ಅದನ್ನು ತಡೆಹಿಡಿಯಲಾಗದು ಎಂದು ಆಯೋಗ ಹೇಳಿದೆ.
ಈ ಮಾಹಿತಿ ವಾಣಿಜ್ಯ ಗೌಪ್ಯತೆಗೆ ಸಂಬಂಧಿಸಿದ್ದು ಹಾಗೂ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಸಾರ್ವಜನಿಕ ರಂಗದ ಸಂಸ್ಥೆಯೊಂದು ತನ್ನ ಬಳಿ ಇರಿಸಿಕೊಂಡಿದೆ. ಇದನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯಿದೆ ಎಂಬ ಏರ್ ಇಂಡಿಯಾದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಾದವನ್ನು ಕೇಂದ್ರ ಮಾಹಿತಿ ಆಯೋಗ ತಿರಸ್ಕರಿಸಿದೆ.
"ಪ್ರಧಾನಿಯ ಅಧಿಕೃತ ವಿದೇಶ ಪ್ರವಾಸಗಳ ದಿನ, ಸಮಯ ಹಾಗೂ ಸ್ಥಳಗಳ ಬಗೆಗಿನ ಮಾಹಿತಿಗೆ ಆರ್ ಟಿಐ ಕಾಯಿದೆಯ ಸೆಕ್ಷನ್ 8 ಯಾ 9ರ ಅನ್ವಯ ವಿನಾಯಿತಿಯಿದೆಯೆನ್ನುವುದು ಒಪ್ಪತಕ್ಕದ್ದಲ್ಲ'' ಎಂದು ಮುಖ್ಯ ಮಾಹಿತಿ ಆಯುಕ್ತ ಅಮಿತಾವ ಭಟ್ಟಾಚಾರ್ಯ ಹೇಳಿದ್ದಾರೆ. ಪ್ರಧಾನಿಯ ವಿದೇಶ ಪ್ರವಾಸಗಳು ಸಾರ್ವಜನಿಕ ಹಣವನ್ನು ಉಪಯೋಗಿಸಿ ಆಯೋಜಿಸಲಾಗುವುದರಿಂದ ಪ್ರತಿಯೊಂದು ಬಿಲ್ ಹಾಗೂ ಆ ಬಿಲ್ ಮೊತ್ತ ಪಾವತಿ ದಿನಾಂಕಗಳನ್ನು ಬಹಿರಂಗಪಡಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಆರ್ ಟಿಐ ಅರ್ಜಿದಾರ ಲೋಕೇಶ್ ಬಾತ್ರ ಅವರು ಕೋರಿದ ಮಾಹಿತಿ ಆರ್ ಟಿಐ ಕಾಯಿದೆಯ ಕೆಲವೊಂದು ಸೆಕ್ಷನ್ ಗಳನ್ವಯ ನೀಡಲಾಗದು ಎಂಬ ಏರ್ ಇಂಡಿಯಾ ವಾದ ಕೂಡ ಒಪ್ಪಲಾಗುವುದಿಲ್ಲ ಎಂದು ಆಯೋಗ ತಿಳಿಸಿದೆ. ಬಾತ್ರ ಅವರು ಪ್ರಧಾನಿ ವಿದೇಶ ಪ್ರವಾಸಗಳ ವೆಚ್ಚದ ಮಾಹಿತಿ ಕೋರಿ ಸೆಪ್ಟೆಂಬರ್ 14, 2016ರಂದು ಅರ್ಜಿ ಸಲ್ಲಿಸಿದ್ದರು.







