ಪ್ರಧಾನಿ ಮೋದಿಗೆ ಛೀಮಾರಿ ಹಾಕಿದ ಪಾಟೀಲ ಪುಟ್ಟಪ್ಪ

ಧಾರವಾಡ, ಮೇ 9: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಷ ಹೊರಹಾಕಿ, ಈ ಮನುಷ್ಯನಿಂದ ಭಾರತವನ್ನು ಮುಕ್ತಗೊಳಿಸಬೇಕೆಂದು ಕರೆಕೊಟ್ಟ ಬೆನ್ನಲ್ಲಿಯೇ ಇನ್ನೊಬ್ಬ ಹಿರಿಯ ಲೇಖಕ ಪಾಟೀಲ ಪುಟ್ಟಪ್ಪ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನಿನ್ನೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ 'ಮತದಾರರ ಜಾಗೃತಿ ಕಾರ್ಯಕ್ರಮ'ದಲ್ಲಿ ಅಧ್ಯಕ್ಷತೆ ವಹಿಸಿ ಪಾಪು ಮಾತನಾಡಿ ಮೋದಿಯ ಮೇಲೆ ಬೇಸರ ವ್ಯಕ್ತ ಪಡಿಸಿದರು. ಪಕ್ಷಾತೀತವಾಗಿ ನಡೆಯಬೇಕಾಗಿದ್ದ ಸಭೆಯಲ್ಲಿ ಅವರು ಸಿಟ್ಟನ್ನು ತಡೆಯಲಾರದೆ ಸತ್ಯವನ್ನು ಹಾಗೂ ಸರಿಯಾದುದನ್ನು ಹೇಳಲೇಬೇಕಾಗಿದೆ ಎಂದ ಪಾಪು ಅವರು ಮೋದಿ ಮೇಲೆ ಹರಿಹಾಯ್ದರು.
ಪ್ರಧಾನಿ ಹುದ್ದೆಯ ಘನತೆಯನ್ನು ಮೊದಲ ಬಾರಿಗೆ ಮೋದಿ ಹಾಳುಗೆಡುಹಿದ್ದಾರೆ. ಬಾಯಿಗೆ ಬಂದ ಹಾಗೆ ಮಾತಾಡುವುದು ಆ ಮನುಷ್ಯನ ಜ್ಞಾನಮಟ್ಟ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು. ದೇಶದಲ್ಲಿ ಹಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲವಾಗಿದೆ ಮತ್ತು ಅವರ ಮಾನ ಮರ್ಯಾದೆ ಹರಾಜು ಹಾಕಲಾಗಿದೆ. ಕಟ್ಟಿಕೊಂಡ ಹೆಂಡತಿಯನ್ನು ಮೂಲೆಗುಂಪಾಗಿಸಿ ತಾನು ಪ್ರಪಂಚ ಸುತ್ತುವುದು ಯಾವ ಗಂಡಸಿಗೂ , ಪ್ರಧಾನಿಗೂ ಶೋಭೆ ತರುವುದಿಲ್ಲ ಎಂದರು. ಕೆಲವರನ್ನು ಮುಧೋಳ ನಾಯಿಗಿಂತ ಕೆಳಮಟ್ಟವರೆಂದು ಹೀಯಾಳಿಸಿದ್ದಕ್ಕೆ ಮೋದಿಯನ್ನು ತರಾಟೆಗೆ ತೆಗೆದುಕೊಂಡರು.







