ರಸ್ತೆ ಅಪಘಾತ: ಕ್ರಿಕೆಟಿಗ ಶಾರ್ದೂಲ್ ಹೆತ್ತವರಿಗೆ ಗಾಯ

ಮುಂಬೈ, ಮೇ 9: ಮುಂಬೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಹೆತ್ತವರು ಪ್ರಯಾಣಿಸುತ್ತಿದ್ದ ಬೈಕ್ ಮಂಗಳವಾರ ರಾತ್ರಿ ಪಾಲ್ಘರ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.
ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದ ಸಂಭ್ರಮದಲ್ಲಿದ್ದ ಶಾರ್ದೂಲ್ ಠಾಕೂರ್ ಈ ಸುದ್ದಿ ಆಘಾತವುಂಟು ಮಾಡಿದೆ.
ಘಟನೆ ನಡೆದ ತಕ್ಷಣ ಗಾಯಗೊಂಡಿರುವ ಶಾರ್ದೂಲ್ ಹೆತ್ತವರನ್ನು ಡಾ.ಧವಾಲೆ ಚಾರಿಟೇಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾರ್ದೂಲ್ ತಂದೆ ನರೇಂದ್ರ ಠಾಕೂರ್ ಮೆದುಳು ಹೆಪ್ಪುಗೆಟ್ಟಿರುವುದು ಸ್ಕಾನಿಂಗ್‌ನಲ್ಲಿ ಪತ್ತೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶಾರ್ದೂಲ್ ತಂದೆ-ತಾಯಿಯನ್ನು ನೋಡಲು ಮುಂಬೈಗೆ ಧಾವಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ್ನು ಪ್ರತಿನಿಧಿಸುತ್ತಿರುವ ಠಾಕೂರ್ ಶುಕ್ರವಾರ ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಆಡುವುದು ಅನುಮಾನ.
ನರೇಂದ್ರ ಹಾಗೂ ಅವರ ಪತ್ನಿ ಪಾಲ್ಘರ್‌ನಲ್ಲಿ ಮದುವೆ ಸಮಾರಂಭದಲ್ಲಿ ಹಾಜರಾಗಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೀದಿ ಬೆಳಕು ಇಲ್ಲದ ಕಾರಣ ಸುಂದರಮ್ ಶಾಲೆ ಬಳಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಗಮನಕ್ಕೆ ಬರಲಿಲ್ಲ. ಹೀಗಾಗಿ ಬೈಕ್ ಸ್ಕಿಡ್ ಆಗಿ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾರ್ದೂಲ್ ತಂದೆಯ ಸ್ಥಿತಿ ಸ್ಥಿರವಾಗಿದೆ. ತಾಯಿಗೆ ಅಲ್ಪಸ್ವಲ್ಪ ಗಾಯವಾಗಿದೆ ಎಂದು ವರದಿಯಾಗಿದೆ.





