ಗಂಟಾಲ್ಕಟ್ಟೆ: ಸಂಶಯಾಸ್ಪದ ಆತ್ಯಹತ್ಯೆ ಪ್ರಕರಣ; ಮೂವರು ವಶ

ಅಸ್ಲಾಂ, ರಮೀಝ್, ಹಾರಿಸ್
ಮೂಡುಬಿದಿರೆ, ಮೇ.9 : ಮಾನಸಿಕವಾಗಿ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಮೂಲಕ ಮಹಿಳೆಯೋರ್ವರ ಸಾವಿಗೆ ಕಾರಣರಾಗಿರುವ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಕೇರಳದ ಕಾಂಞಗಾಡಿನಲ್ಲಿ ನಿನ್ನೆ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯ ನೀರಲ್ಕೆ ನಿವಾಸಿ ಅಸ್ಲಾಂ, ರಮೀಝ್ ಅಡ್ಡೂರು ಹಾಗೂ ಮಹಮ್ಮದ್ ಹಾರಿಸ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಉಮರಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ : ಎ.11ರಂದು ಕಲ್ಲಬೆಟ್ಟು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಗಂಟಾಲ್ಕಟ್ಟೆಯ ನೀರಲ್ಕೆ ನಿವಾಸಿ ಅಸ್ಲಾಂನ ಪತ್ನಿ ಕೈರುನ್ನೀಸಾ (22) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭ ಆಕೆಯ ಪತಿ ಮತ್ತು ಮಾವ ಉಮರಬ್ಬ ನಾಪತ್ತೆಯಾಗಿದ್ದಲ್ಲದೆ, ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಹಲವು ಸಂಶಯಗಳಿಗೆ ಕಾರಣವಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿ ಮೂಡುಬಿದಿರೆಗೆ ಕರೆದುಕೊಂಡು ಬಂದು ತನಿಖೆ ಆರಂಭಿಸಿದ್ದು, ಅಸ್ಲಾಂ, ನಾದಿನಿಯ ಪತಿ ರಮೀಝ್ ಅಡ್ಡೂರ್, ಅಸ್ಲಾಂನ ಚಿಕ್ಕಪ್ಪನ ಮಗ ಮಹಮ್ಮದ್ ಹಾರಿಸ್ ಹಾಗೂ ಮಾವ ಉಮರಬ್ಬ ಕೈರುನ್ನಿಸಾರಿಗೆ ಮಾನಸಿಕವಾಗಿ ಹಿಂಸೆ ನೀಡಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಅಮ್ಮುಂಜೆಯ ನಿವಾಸಿ ಕೈರುನ್ನೀಸಾರನ್ನು ಅಸ್ಲಾಂ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಎರಡೂವರೆ ವರ್ಷದ ಹೆಣ್ಣು ಮಗುವಿದೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್ ಅವರ ಆದೇಶದಂತೆ ಉಪನಿರೀಕ್ಷಕ ದೇಜಪ್ಪ ನೇತೃತ್ವದಲ್ಲಿ ಅಪರಾಧ ವಿಭಾಗದ ಪೊಲೀಸರಾದ ಮುಹಮ್ಮದ್ ಮನ್ಸೂರ್, ಚಂದ್ರಹಾಸ್, ಅಖಿಲ್ ಮತ್ತು ಸಂತೋಷ್ ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.







