ಹನೂರು: ಬಿಎಸ್ಪಿ ರಾಜ್ಯಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ವಿಕಾಸ ಪರ್ವ ಸಮಾವೇಶ

ಹನೂರು,ಮೇ.09: ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಕಾಸ ಪರ್ವ ಕಾರ್ಯಕ್ರಮವು ಬಿಎಸ್ಪಿ ರಾಜ್ಯಧ್ಯಕ್ಷ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯದ್ಯಕ್ಷರ ಮಹೇಶ್, ಕ್ಷೇತ್ರದಲ್ಲಿ 246 ಬೂತ್‍ಗಳು ಇದ್ದು, ಜೆಡಿಎಸ್‍ನ ಗೆಲುವಿಗೆ ಪ್ರತಿಯೊಂದು ಬೂತ್‍ನಲ್ಲಿ ಕಾರ್ಯಕರ್ತರ ಪರಿಶ್ರಮ ಅಗತ್ಯವಾಗಿರುತ್ತದೆ. ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಮತ್ತು ಹನೂರಿನಲ್ಲಿ ಆರ್.ಮಂಜುನಾಥ್ ಗೆದ್ದರೆ ಅದು ಹೆಚ್.ಡಿ.ಕುಮಾರಸ್ವಾಮಿ ಗೆಲುವಾಗಿರುತ್ತದೆ. ನಾವಿಬ್ಬರು ಗೆದ್ದು ಅವರ ಕೈ ಬಲ ಪಡಿಸುವ ಜೊತೆಗೆ ರಾಜ್ಯದಲ್ಲಿ ಜೆಡಿಎಸ್ 113 ಸ್ಥಾನ ಗಳಿಸಿ 68 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತ ಕೊನೆಗೊಳ್ಳಬೇಕು ಎಂದರು.
ಈ ಹಿಂದಿನ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ರೈತರ, ಬಡವರ, ದೀನದಲಿತರ ಹಾಗೂ ಹಿಂದುಳಿದ ವರ್ಗದ ಜನರ ಕಲ್ಯಾಣವನ್ನು ನಿರ್ಲಕ್ಷಿಸುವುದರ ಮೂಲಕ ಉತ್ತಮ ಆಡಳಿತ ನೀಡಿಲ್ಲ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ ಬಂದರೆ 24 ಗಂಟೆಯಲ್ಲಿ ರೈತರು, ನೇಕಾರರು, ಶ್ರೀ ಶಕ್ತಿ ಗುಂಪುಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುತ್ತದೆ. ಹಾಗೂ ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಹೊಸ ಕೃಷಿ ನೀತಿ ಯೋಜನೆ ಜಾರಿಗೆ ತರುವ ಮೂಲಕ ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದರು.
ಕುಮಾರಸ್ವಾಮಿ ಆಗಮನಕ್ಕೆ ಮಳೆ ಅಡ್ಡಿ: ಪಟ್ಟಣ ಹೊರ ವಲಯ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ಧ ಬಿಎಸ್ಪಿ ಬೆಂಬಲಿಸಿ ಜೆಡಿಎಸ್ ಅಭ್ಯರ್ಥಿ ಪರ ಮತ ಪ್ರಚಾರ ಬಹಿರಂಗ ಸಭೆಗೆ ಕುಮಾರಸ್ವಾಮಿ ಆಗಮಿಸಬೇಕಿತ್ತು. ಆದರೆ ಮಳೆಯ ಕಾರಣ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗದೆ ಅವರು ಸಭೆಗೆ ಆಗಮಿಸಲಿಲ್ಲ. ನಂತರ ಕಾರ್ಯಕ್ರಮವು ಬಿಎಸ್ಪಿ ರಾಜ್ಯಾಧ್ಯಕ್ಷರ ಸಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಕಾಮರಾಜು, ಮುಖಂಡ ಪೊನ್ನಾಚಿ ಮಹಾದೇವಸ್ವಾಮಿ, ಮಂಗಲ ರಾಜಶೇಖರ್, ಪಾಳ್ಯ ರಾಚಪ್ಪ, ಬಸಪ್ಪನದೊಡ್ಡಿ ಶಿವಮೂರ್ತಿ, ನಾಗೇಂದ್ರ, ಕಾಮಗೆರೆ ರವಿ, ಲಿಂಗೇಗೌಡ, ಬಿಎಸ್ಪಿ ಅಧ್ಯಕ್ಷ ಪಂಚಾಕ್ಷರಿ, ಶಾಗ್ಯ ಮಹೇಶ್, ನಂದೀಶ್, ಲೋಕೇಶ್ ವಕೀಲ ರುದ್ದರಾದ್ಯ, ಒಡೆಯರ್ ಪಾಳ್ಯ ಮಹಾದೇವಪ್ರಸಾದ್, ಎಸ್.ಸಕಲೇಶ್‍ಕುಮಾರ್ ಇನ್ನಿತರರಿದ್ದರು.







