ಬೆಂಗಳೂರು: ರೋಡ್ ಶೋ ವೇಳೆ ಅಮಿತ್ ಶಾಗೆ ಪೊರಕೆ- ಆಪ್‌ಗೆ ಚಪ್ಪಲಿ ಪ್ರದರ್ಶನ

ಬೆಂಗಳೂರು, ಮೇ 9: ನಗರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸುತ್ತಿದ್ದ ವೇಳೆ ಎದುರಿಗೆ ಬಂದ ಆಪ್ ಕಾರ್ಯಕರ್ತರು ತಮ್ಮ ಪಕ್ಷದ ಗುರುತಾದ ಪೊರಕೆಯನ್ನು ಪ್ರದರ್ಶಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಅವರಿಗೆ ಚಪ್ಪಲಿ ಪ್ರದರ್ಶಿಸಿದ ಘಟನೆ ಜರುಗಿದೆ.
ಆಪ್ ಕಾರ್ಯಕರ್ತೆಯರು ಮಾಮೂಲಿಯಂತೆ ತಮ್ಮ ಪಕ್ಷದ ಗುರುತಾದ ಪೊರಕೆಯನ್ನು ಹಿಡಿದು ಪ್ರಚಾರ ಮಾಡುತ್ತಿದ್ದರು. ಅದೇ ಸಮಯಕ್ಕೆ ಎದುರಿನಿಂದ ಅಮಿತ್ ಶಾ ರೋಡ್ ಶೋ ನಡೆಯುತ್ತಿತ್ತು, ಈ ವೇಳೆ ಬಿಜೆಪಿ ಕಾರ್ಯಕರ್ತರು ಜೋರಾಗಿ ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಆಪ್ ಕಾರ್ಯಕರ್ತರು ತಮ್ಮ ಪಕ್ಷದ ಗುರುತು ಪೊರಕೆಯನ್ನು ಹಿಡಿದುಕೊಂಡು ಆಪ್ ಪರ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಚಪ್ಪಲಿಗಳನ್ನು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುವ ಸಾಧ್ಯತೆ ಇದ್ದರೂ, ಪೊಲೀಸರು ಮಧ್ಯ ಪ್ರವೇಶಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು. ಅಲ್ಲದೆ ಅಮಿತ್ ಶಾ ಸ್ವತಃ ಮೈಕ್ ಪಡೆದು ಕಾರ್ಯಕರ್ತರನ್ನು ಬೇಗೆ ಬೇಗ ಮುಂದೆ ಹೋಗುವಂತೆ ಸೂಚನೆ ನೀಡಿದರು ಎನ್ನಲಾಗಿದೆ.





