'ಬೆಂಗಳೂರು ಅಭಿವೃದ್ಧಿಯಾಗಿರಲಿಲ್ಲ ಎನ್ನುವುದು ಕೆಂಪೇಗೌಡ, ನಗರದ ಇತಿಹಾಸಕ್ಕೆ ಮಾಡಿದ ಅಪಮಾನ'
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೆಂಗಳೂರು, ಮೇ 9: ನರೇಂದ್ರಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ 70 ವರ್ಷಗಳಲ್ಲಿ ದೇಶದಲ್ಲಿ ಯಾವುದೆ ಅಭಿವೃದ್ಧಿಯಾಗಿರಲಿಲ್ಲವೇ? ಬೆಂಗಳೂರಿನ ಅಭಿವೃದ್ಧಿ ಅವರ ಮಂತ್ರದಂಡದಿಂದ ಆಗಿದೆಯೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಶ್ನಿಸಿದರು.
ಬುಧವಾರ ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಕಾಂಗ್ರೆಸ್ ಅಭ್ಯರ್ಥಿ ರೋಷನ್‌ಬೇಗ್ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಷ್ಠಿತ ಎಚ್‌ಎಎಲ್ ಸಂಸ್ಥೆಯನ್ನು ರಾಜ್ಯದ ಜನ ನಿರ್ಮಿಸಲಿಲ್ಲವೇ? ಬೆಂಗಳೂರು ಐಟಿ ರಾಜಧಾನಿಯಾಗಿರಲಿಲ್ಲವೇ? ಇವೆಲ್ಲ ಅಭಿವೃದ್ಧಿ ಮೋದಿ ಮಂತ್ರ ದಂಡದಿಂದ ಆಗಿದೆಯೇ ಎಂದರು.
ಇಡೀ ವಿಶ್ವದಲ್ಲೆ ಭಾರತದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದು ಬೆಂಗಳೂರಿಗರು. ಇಲ್ಲಿ ಏನೂ ಅಭಿವೃದ್ಧಿಯಾಗಿರಲಿಲ್ಲ ಎಂದರೆ, ಅದು ನಿಮ್ಮ ಪೋಷಕರು, ಬೆಂಗಳೂರಿನ ಇತಿಹಾಸ, ಕೆಂಪೇಗೌಡರಿಗೆ ಮಾಡಿದ ಅಪಮಾನ ಎಂದು ರಾಹುಲ್‌ಗಾಂಧಿ ಟೀಕಿಸಿದರು.
ಈ ಚುನಾವಣೆಯು ಸಿದ್ಧಾಂತಗಳ ನಡುವಿನ ಹೋರಾಟ. ಒಂದೆಡೆ ಬಸವಣ್ಣ, ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ನಮ್ಮ ನಾಯಕರು. ಮತ್ತೊಂದೆಡೆ ಬಿಜೆಪಿ, ನರೇಂದ್ರಮೋದಿ ಹಾಗೂ ಆರೆಸೆಸ್ಸ್ ಇದೆ. ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದು ನಮ್ಮ ಪಕ್ಷದ ನಿಲುವಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ, 5 ರೂ.ಗಳನ್ನು ಹಾಕಿಲ್ಲ. ಬದಲಾಗಿ, ಬಡವರ ಹಣ ಕಸಿದುಕೊಂಡು, ಅವರನ್ನು ಬ್ಯಾಂಕ್ ಮುಂದೆ ನಿಲ್ಲಿಸಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಮ್ಮ ಪಕ್ಕದಲ್ಲಿ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರನ್ನು ಕೂರಿಸಿಕೊಳ್ಳುತ್ತಾರೆ. ಯಡಿಯೂರಪ್ಪರನ್ನು ಯಾವ ಅರ್ಹತೆಯ ಆಧಾರದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೀರಾ ಎಂಬುದನ್ನು ಹೇಳಿ ಎಂದು ಅವರು ಆಗ್ರಹಿಸಿದರು.
ಬೆಂಗಳೂರು 3 ಲಕ್ಷ ಕೋಟಿ ರೂ.ಗಳನ್ನು ಐಟಿ ರಫ್ತಿನಲ್ಲಿ ಸಂಪಾದಿಸಿದೆ. ಕೇಂದ್ರದಲ್ಲಿ ನಮ್ಮ ಸರಕಾರವಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳನ್ನು ನೀಡಿದ್ದೆವು. ಆದರೆ, ನರೇಂದ್ರಮೋದಿ ಸರಕಾರ ಬೆಂಗಳೂರಿಗೆ ನೀಡಿರುವುದು ಕೇವಲ 550 ಕೋಟಿ ರೂ.ಗಳು ಮಾತ್ರ ಎಂದು ರಾಹುಲ್‌ಗಾಂಧಿ ಹೇಳಿದರು.
ರಾಜ್ಯ ಸರಕಾರವು ಜನತೆಯ ಪರವಾಗಿ ಕೆಲಸ ಮಾಡಿದೆ. ಪ್ರತಿಯೊಬ್ಬರಿಗೂ ಉಚಿತವಾಗಿ ತಲಾ 7 ಕೆಜಿ ಅಕ್ಕಿ, ರೈತರ 8 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ರಾಜ್ಯದ ರಸ್ತೆಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪ ನೇತೃತ್ವದ ಸರಕಾರವು ದೇಶದ ಅತ್ಯಂತ ಭ್ರಷ್ಟ ಸರಕಾರ ಎಂದು ಅಮಿತ್ ಶಾ ಅಪರೂಪಕ್ಕೆ ತಮ್ಮ ಬಾಯಿಯಿಂದ ಸತ್ಯ ಹೇಳಿದರು. ದೇಶದಲ್ಲಿ ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಿದ್ದರೂ ಪ್ರಧಾನಿ ಒಂದು ಶಬ್ದವನ್ನು ಕೂಡಾ ಹೇಳುತ್ತಿಲ್ಲ ಎಂದು ಅವರು ದೂರಿದರು.
ನರೇಂದ್ರಮೋದಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ಘೋಷಣೆಯನ್ನು ಹೇಳುತ್ತಿದ್ದರು. ಆದರೆ, ಈಗ ಅದನ್ನು ಸ್ವಲ್ಪ ಮಾರ್ಪಡಿಸಿ ‘ಬೇಟಿ ಬಚಾವೋ, ಬಿಜೆಪಿಕೆ ಎಂಎಲ್‌ಎ ಸೇ’ ಎಂದಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಯ ಶಾಸಕನೊಬ್ಬ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ರೋಹಿತ್ ವೇಮುಲಾ ಸಾವು, ಉನ್ನಾವ್ ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಾಗಲೂ ಮೋದಿ ಮಾತನಾಡಿಲ್ಲ ಎಂದು ಅವರು ಟೀಕಿಸಿದರು.
ನ್ಯಾಯಕ್ಕಾಗಿ ಜನತೆ ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ. ಆದರೆ, 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ದೇಶದ ಜನತೆಯ ಮುಂದೆ ಕೈ ಜೋಡಿಸಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ನ್ಯಾ.ಲೋಯಾ ಸಾವಿನ ಪ್ರಕರಣ, ಅಮಿತ್ ಶಾ ಪುತ್ರ 50 ಸಾವಿರ ರೂ.ಗಳನ್ನು ಮೂರೆ ತಿಂಗಳಲ್ಲಿ 80 ಕೋಟಿ ರೂ.ಗಳನ್ನಾಗಿ ಪರಿವರ್ತಿಸಿದರ ಬಗ್ಗೆಯೂ ನರೇಂದ್ರಮೋದಿ ಮೌನ ವಹಿಸಿದ್ದಾರೆ ಎಂದು ಅವರು ದೂರಿದರು.
ರಫೇಲ್ ಯುದ್ಧ ವಿಮಾನಗಳ ನಿರ್ಮಾಣಕ್ಕೆ ಎಚ್‌ಎಎಲ್ ಜೊತೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಿ, 45 ಸಾವಿರ ಕೋಟಿ ರೂ.ಸಾಲವನ್ನು ಹೊತ್ತಿರುವ ತಮ್ಮ ಆತ್ಮೀಯ ಸ್ನೇಹಿತನೊಂದಿಗೆ ವಿಮಾನಗಳ ನಿರ್ಮಾಣದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಹುಲ್‌ಗಾಂಧಿ ಹೇಳಿದರು.
ನರೇಂದ್ರಮೋದಿ ಬಳಿ ಈಗ ಏನು ಉಳಿದಿಲ್ಲ. ನನ್ನ ಹಾಗೂ ಸಿದ್ದರಾಮಯ್ಯರನ್ನು ಟೀಕಿಸುವುದೆ ಅವರಿಗೆ ಕಾಯಕವಾಗಿದೆ. ಇನ್ನು 10 ದಿನಗಳಲ್ಲಿ ರಾಜ್ಯದ ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ. ಮೊದಲು ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ಹಾಗೂ ಆನಂತರ ದೇಶದಿಂದಲೆ ನಿಮ್ಮನ್ನು ಓಡಿಸುತ್ತೇವೆ ಎಂದು ರಾಹುಲ್‌ಗಾಂಧಿ ಗುಡುಗಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಅಶೋಕ್ ಗೆಹ್ಲೋಟ್, ವಿಧಾನಪರಿಷತ್ ಸದಸ್ಯ ರಿಝ್ವೋನ್ ಅರ್ಶದ್, ಮಾಜಿ ಸಂಸದ ಮುಹಮ್ಮದ್ ಅಫ್ಝಲ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂವಿಧಾನವನ್ನು ಮುಟ್ಟಿ ನೋಡೋಣ
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರದ ಸಚಿವರೊಬ್ಬರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡಿದ್ದಾರೆ. ನರೇಂದ್ರಮೋದಿಯಾಗಲಿ, ಆರೆಸೆಸ್ಸ್ ಆಗಲಿ ನಿಮಗೆ ತಾಕತ್ತು ಇದ್ದರೆ ಸಂವಿಧಾನವನ್ನು ಮುಟ್ಟಿ ನೋಡೋಣ. ಆನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ನೋಡಿ.
-ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ







