ರಾಜ್ಯ ವಿಧಾನಸಬೆ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಮೇ.10 ರಂದು ತೆರೆ
ಮತದಾರರ ಮನಗೆಲ್ಲಲು ಕೊನೆಯ ಕ್ಷಣದ ಕಸರತ್ತು

ಬೆಂಗಳೂರು, ಮೇ 9: ರಾಜ್ಯ ವಿಧಾನಸಭೆಗೆ ಇದೇ 12ರಂದು ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ(ಮೇ 10) ಸಂಜೆ ತೆರೆ ಬೀಳಲಿದ್ದು, ಮತದಾರರಲ್ಲದವರು ನಾಳೆ ಸಂಜೆಯೊಳಗೆ ಕ್ಷೇತ್ರವನ್ನು ಬಿಟ್ಟು ತೆರಳಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸೇರಿ ಘಟಾನುಘಟಿ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ರಾಜ್ಯದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. 224 ಕ್ಷೇತ್ರಗಳ ಪೈಕಿ ಬಿಜೆಪಿ ಅಭ್ಯರ್ಥಿ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರವನ್ನು ಹೊರತುಪಡಿಸಿ 223 ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದೆ.
ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಮತ್ತು ಸ್ಥಳೀಯ ಕಾರ್ಯಕರ್ತರು ಆ ಬಳಿಕ ಮನೆ-ಮನೆ ಪ್ರಚಾರಕ್ಕೆ ಅವಕಾಶವಿರುತ್ತದೆ. ಅಧಿಕಾರದ ಗದ್ದುಗೆ ಏರಲು ಇಪ್ಪತ್ತು ದಿನಗಳಿಂದ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಪ್ರಚಾರದಲ್ಲಿದ್ದ ಪೈಪೋಟಿ ನಾಳೆ ಸಂಜೆಯಿಂದ ಕೊಂಚ ತಣ್ಣಗಾಗಲಿದೆ. ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳುವುದರಿಂದ ಇಂದು ಚುನಾವಣಾ ಪ್ರಚಾರದ ಅಬ್ಬರ ಮುಗಿಲು ಮುಟ್ಟಿತ್ತು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಬೆಂಗಳೂರು ನಗರದ ವಿವಿಧೆಡೆ ರೋಡ್ ಶೋ ನಡೆಸುವ ಮೂಲಕ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಅತ್ತ ಕೊಲಾರ, ಚಿಕ್ಕಮಗಳೂರಿನಲ್ಲಿ ಮತ್ತಿತರ ಕಡೆ ಪ್ರಧಾನಿ ಮೋದಿ ಬಿರುಸಿನ ಪ್ರಚಾರ ಕೈಗೊಂಡಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ, ಜೆಡಿಎಸ್‌ನ ವರಿಷ್ಠ ದೇವೇಗೌಡ ಮತದಾರನ ಓಲೈಸುವ ಕಾರ್ಯದಲ್ಲಿ ತೊಡಗಿದ್ದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಸೇರಿದಂತೆ ಹಲವು ಮುಖಂಡರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ವಿವಿಧೆಡೆ ರೋಡ್ ಶೋ ಮತ್ತು ಅಬ್ಬರದ ಪ್ರಚಾರ ನಡೆಸಿದರು.
ಮೇ 10ರ ಸಂಜೆ 6 ಗಂಟೆಯ ಬಳಿಕ ಯಾವುದೇ ರಾಜಕೀಯ ಪಕ್ಷಗಳು ಮತಯಾಚನೆಗೆ ಯಾವುದೇ ಸಭೆ-ಸಮಾವೇಶ, ಸಾರ್ವಜನಿಕ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಎಲ್ಲ ಪಕ್ಷಗಳಿಗೆ ಈಗಾಗಲೇ ನಿರ್ದೇಶನ ನೀಡಿದೆ.
ಅಲ್ಲದೆ, ಮೇ 10ರ ಸಂಜೆ 6 ಗಂಟೆಯಿಂದ ಮತದಾನ ನಡೆಯುವ ಮೇ 12ರ ಸಂಜೆ 6:30ರ ವರೆಗೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಯಾವುದೇ ಚುನಾವಣಾ ಸಂಬಂಧಿ ಕಾರ್ಯಕ್ರಮ, ಅಭಿಪ್ರಾಯ, ಚರ್ಚೆ, ವಿಶ್ಲೇಷಣೆ, ಚುನಾವಣಾ ಸಮೀಕ್ಷೆ ಫಲಿತಾಂಶ ಬಿತ್ತರಿಸುವಂತಿಲ್ಲ ಎಂದು ಸೂಚನೆ ನೀಡಿದೆ.







