ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಾರ್ಮೆಂಟ್ಸ್ ನೌಕರರ ಸಮಸ್ಯೆ ನಿವಾರಣೆ: ರಾಹುಲ್‌ಗಾಂಧಿ
ಗಾರ್ಮೆಂಟ್ಸ್ ನೌಕರರೊಂದಿಗೆ ಸಂವಾದ ಕಾರ್ಯಕ್ರಮ
.jpg)
ಬೆಂಗಳೂರು, ಮೇ 9: ಗಾರ್ಮೆಂಟ್ಸ್ ನೌಕರರೊಂದಿಗೆ ಸಂವಾದ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ನೌಕರರ ಎಲ್ಲ ಸಮಸ್ಯೆಗಳನ್ನು ಆಲಿಸಿದರು. ನಂತರ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಾರ್ಮೆಂಟ್ಸ್ ನೌಕರರ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ಬುಧವಾರ ಹೊಸೂರು ಮುಖ್ಯ ರಸ್ತೆಯಲ್ಲಿನ ಕ್ರಿಯೇಟಿವ್ ಗಾರ್ಮೆಂಟ್ಸ್ ಕಂಪನಿಯ ನೌಕರರ ಜತೆ ಸಂವಾದ ನಡೆಸಿದ ಅವರು, ಗಾರ್ಮೆಂಟ್ಸ್ ನೌಕರರ ಸಂಕಷ್ಟಗಳನ್ನು ಅವರ ಮಾತಿನಲ್ಲೆ ಕೇಳಿದ್ದೇನೆ. ಅವರ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಪ್ರದಾನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಮಸ್ಯೆಗಳನ್ನು ಬಿಚ್ಚಿಟ್ಟ ನೌಕರರು: ಸಂವಾದ ಕಾರ್ಯಕ್ರಮದಲ್ಲಿ ನೂರಾರು ಗಾರ್ಮೆಂಟ್ಸ್ ನೌಕರರು ಭಾಗವಹಿಸಿ, ನಮಗೆ ತಿಂಗಳಿಗೆ 6-8 ಸಾವಿರ ರೂ. ವೇತನ ಸಿಗುತ್ತದೆ. ಅದರಲ್ಲಿ 2 ಸಾವಿರ ರೂ. ಬಸ್ ಪ್ರಯಾಣಕ್ಕೆ ಹೋಗುತ್ತದೆ. ಉಳಿದ ಹಣದಲ್ಲಿ ಜೀವನ ನಡೆಸುವುದು ಕಷ್ಟ. ಹಾಗಾಗಿ ಉಚಿತ ಬಸ್‌ಪಾಸ್ ನೀಡಬೇಕು. ಆರ್‌ಟಿಇ ಅಡಿ ಎಲ್ಲ ಮಕ್ಕಳಿಗೂ ಸೀಟು ನೀಡಬೇಕು ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡರು.
ಕಾರ್ಮಿಕ ವಿರೋಧಿ ಬಿಜೆಪಿ: ಸಣ್ಣ ಉದ್ದಿಮೆದಾರರ, ರೈತರ ಬಗ್ಗೆ ಗಮನ ಹರಿಸದ ಪ್ರಧಾನಿ ನರೇಂದ್ರ ಮೋದಿ, 15 ಜನ ಉದ್ಯಮಿಗಳ 2 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ, ಸಣ್ಣ ಉದ್ದಿಮೆದಾರರ ಸಾಲ ಮನ್ನಾ ಮಾಡಿಲ್ಲ. ಇಂತಹ ಕಾರ್ಮಿಕ ವಿರೋಧಿ ಬಿಜೆಪಿಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ರಾಹುಲ್‌ಗಾಂಧಿ ತಿಳಿಸಿದರು.
ದೇವಸ್ಥಾನಕ್ಕೆ ಭೇಟಿ: ಸಂವಾದ ಕಾರ್ಯಕ್ರಮಕ್ಕೂ ಮೊದಲು ರಾಹುಲ್‌ಗಾಂಧಿ ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಗಣಪತಿ ದರ್ಶನ ಮಾಡಿದರು. ಈ ವೇಳೆ ಅರ್ಚಕರಿಂದ ದೇಗುಲದ ಇತಿಹಾಸದ ಮಾಹಿತಿ ಪಡೆದರು. ನಂತರ ಬೆಂಗಳೂರಿನ ರಸ್ತೆಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.







