ರಾಜ್ಯ ವಿಧಾನಸಭಾ ಚುನಾವಣೆ: ಆಮ್‌ಆದ್ಮಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು, ಮೇ 9: ಆಮ್‌ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಶುದ್ಧವಾದ ನೀರು, ವಿದ್ಯುತ್, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಪ್ರಾಥಮಿಕ ಆರೋಗ್ಯ ಸೇವೆ ಉಚಿತವಾಗಿ ನೀಡಲಾಗುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಎಪಿಯ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಅನಂತರ ಮಾತನಾಡಿದ ಅವರು, ನಾಗರಿಕರು ಗೌರವಯುತವಾದ ಜೀವನ ನಡೆಸಲು ಅಗತ್ಯವಾದ ಸೌಲಭ್ಯಗಳನ್ನು ಎಲ್ಲ ವರ್ಗದ ಜನರಿಗೂ ಉಚಿತವಾಗಿ ತಲುಪಿಸಲು ಎಎಪಿ ಬದ್ಧವಾಗಿದೆ. ಇಂದು ಎಲ್ಲೆಡೆ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಭ್ರಷ್ಟಾಚಾರವನ್ನು ತಪ್ಪಿಸಲು ಇದ್ದಂತಹ ಲೋಕಾಯುಕ್ತ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರ ದುರ್ಬಲಗೊಳಿಸಿದೆ. ಎಎಪಿ ಲೋಕಾಯುಕ್ತ ಸಂಸ್ಥೆಯನ್ನು ಮೊದಲಿನ ಗೌರವಯುತ ಎತ್ತರಕ್ಕೆ ಮೇಲೇರಿಸಲು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಶ್ರಮಿಸಲಿದೆ. ಪ್ರತಿ ವ್ಯಕ್ತಿಗೂ ತನ್ನ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ಪ್ರತಿ 10 ವರ್ಷಕ್ಕೆ 50 ಸಾವಿರ ರೂ. ಸಾಲ ನೀಡಬೇಕು. ಇದರಿಂದ ಅವರ ಉದ್ಯೋಗ ಕುಶಲತೆ ಸಮಯಕ್ಕನುಗುಣವಾಗಿ ಬೆಳೆಯುತ್ತಿರುತ್ತದೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸರಿಯಾಗಿ ನಡೆಸಲಾಗುವುದು. ನಗರ ಪ್ರದೇಶದಲ್ಲಿ ಪ್ರತಿ ಸಾವಿರ ಮನೆಗಳಿಗೆ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆಟದ ಮೈದಾನ ಮತ್ತು ಉದ್ಯಾನವನಗಳನ್ನು ತೆರೆಯಲಾಗುವುದು. ಎಲ್ಲ ವಾಹನ ಸಂಚಾರ ಲಕಗಳನ್ನು ಪ್ರಾಯೋಜಕ ಮುಕ್ತಗೊಳಿಸುವುದು ಎಂದು ಎಎಪಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.







