ಅಕ್ಬರ್ ರಸ್ತೆಯ ಹೆಸರನ್ನು ಮಹಾರಾಣಾ ಪ್ರತಾಪ್ ಎಂದು ಬದಲಿಸಿದ ಕಿಡಿಗೇಡಿಗಳು

ಹೊಸದಿಲ್ಲಿ, ಮೇ 9: ಹೊಸದಿಲ್ಲಿಯ ಪ್ರಸಿದ್ಧ ಅಕ್ಬರ್ ರಸ್ತೆಯ ಹೆಸರನ್ನು ಮಂಗಳವಾರ ರಾತ್ರೋರಾತ್ರಿ ಮಹಾರಾಣಾ ಪ್ರತಾಪ್ ರಸ್ತೆ ಎಂದು ಬದಲಾಯಿಸಿರುವ ಘಟನೆ ನಡೆದಿದ್ದು, ಈ ಕುರಿತು ಹೊಸದಿಲ್ಲಿ ನಗರಪಾಲಿಕೆ ತನಿಖೆಗೆ ಆದೇಶಿಸಿದೆ.
ಅಕ್ಬರ್ ರಸ್ತೆಯ ಹೆಸರನ್ನು ಮಹಾರಾಣಾ ಪ್ರತಾಪ್ ಎಂದು ಬದಲಿಸಬೇಕೆಂಬ ಕೇಂದ್ರ ಸರಕಾರದ ಶಿಫಾರಸು ಪರಿಶೀಲನೆಯ ಹಂತದಲ್ಲಿರುವಾಗಲೇ ಅಕ್ಬರ್ ರಸ್ತೆಯ ಹೆಸರನ್ನು ಸೂಚಿಸುವ ಸೈನ್‌ಬೋರ್ಡ್‌ಗೆ ಮಂಗಳವಾರ ‘ಮಹಾರಾಣಾ ಪ್ರತಾಪ್ ರಸ್ತೆ’ ಎಂಬ ಹೆಸರಿನ ಪೋಸ್ಟರ್ ಅಂಟಿಸಲಾಗಿದೆ. ಈ ಘಟನೆಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಮುಖಂಡರ ನಿವಾಸ ಹಾಗೂ ಕಾಂಗ್ರೆಸ್ ಕಚೇರಿ ಇದೇ ರಸ್ತೆಯಲ್ಲಿದೆ. ಬಳಿಕ ಈ ಪೋಸ್ಟರ್ ಅನ್ನು ತೆರವುಗೊಳಿಸಲಾಗಿದೆ. ರಜಪೂತ್ ದೊರೆಯಾಗಿದ್ದ ಮೇವಾಡದ ಮಹಾರಾಣಾ ಪ್ರತಾಪ್ ಜಯಂತಿ ಕಾರ್ಯಕ್ರಮ ಮೇ 9ರಂದು ಆಚರಿಸಲಾಗುತ್ತಿದ್ದು, ಅದರ ಮುನ್ನಾ ದಿನ ಈ ಘಟನೆ ನಡೆದಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಹೊಸದಿಲ್ಲಿ ನಗರಪಾಲಿಕೆ ತಿಳಿಸಿದೆ.
ಕಳೆದ ವರ್ಷವೂ ಅಕ್ಬರ್ ರಸ್ತೆಯ ಹೆಸರನ್ನು ಮಹಾರಾಣಾ ಪ್ರತಾಪ್ ರಸ್ತೆ ಎಂದು ಬದಲಾಯಿಸುವ ಪ್ರಯತ್ನ ನಡೆದಿತ್ತು. ಅಕ್ಬರ್ ರಸ್ತೆ ಎಂಬ ಹೆಸರಿದ್ದ ನಾಮಫಲಕವನ್ನು ಧ್ವಂಸ ಮಾಡಿ ಮಹಾರಾಣಾ ಪ್ರತಾಪ್ ರಸ್ತೆ ಎಂಬ ಹೆಸರಿದ್ದ ಪೋಸ್ಟರ್ ಅಂಟಿಸಲಾಗಿತ್ತು. ಹಿಂದೂ ಸೇನೆ ಎಂಬ ಸಂಘಟನೆ ಈ ಕೃತ್ಯದ ಜವಾಬ್ದಾರಿ ವಹಿಸಿಕೊಂಡಿತ್ತು.







