ಬಿಜೆಪಿ ಮುಖಂಡರು ವಾಮಾಚಾರ, ಹಣ ಹಂಚಿ ನನ್ನನ್ನು ಸೋಲಿಸಲು ಯತ್ನಿಸುತಿದ್ದಾರೆ: ವಸಂತ ಬಂಗೇರ
ಬೆಳ್ತಂಗಡಿ, ಮೇ 9: ಬಿಜೆಪಿ ಮುಖಂಡರುಗಳು ವಾಮಾಚಾರ ಮಾಡುವ ಹಾಗೂ ಮತದಾರರಿಗೆ ಹಣ ಹಂಚುವ ಮೂಲಕ ನನ್ನನ್ನು ಸೋಲಿಸುವ ಎಲ್ಲಾ ಪ್ರಯತ್ನ ಮಾಡುತಿದ್ದಾರೆ. ಆದರೆ ಬೆಳ್ತಂಗಡಿಯ ಜನತೆಯ ಮುಂದೆ ಇದು ಫಲಿಸದು ಎಂದು ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ ವಸಂತ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಕಳೆದ ಐದು ವರ್ಷಗಳಲ್ಲಿ ತಾಲೂಕಿನಲ್ಲಿ ಯಾವುದೇ ಕೋಮು ಗಲಭೆಗಳಿಗೆ, ಸಂಘರ್ಷಗಳಿಗೆ ಅವಕಾಶ ನೀಡಿಲ್ಲ, ತಾಲೂಕಿನ ಜನತೆ ಶಾಂತಿ, ಸೌಹಾರ್ದತೆಯಿಂದ, ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಇದರಿಂದಾಗಿ ಅಭಿವೃದ್ದಿಯ ವೇಗವೂ ಹೆಚ್ಚಾಗಿದೆ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದರು.
ಐದು ಬಾರಿ ಶಾಸಕನಾಗಿ ತಾಲೂಕಿನ 81 ಗ್ರಾಮಗಳಿಗೂ ವಿದ್ಯುತ್ ಸಂಪರ್ಕ, ಗ್ರಾಮೀಣ ರಸ್ತೆಗಳ ನವೀಕರಣ, ಪರಿಶಿಷ್ಟ ಜತಿ ಪಂಗಡಗಳ ಜನರ ರಸ್ತೆಗಳಿಗೆ ಹಲವೆಡೆ ಕಾಂಕ್ರೀಟಿಕರಣಗೊಂಡ ರಸ್ತೆಗಳು, ಹಲವಾರು ಬೃಹತ್ ಸೇತುವೆಗಳ ನಿರ್ಮಾಣ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, 35,000 ಸಾವಿರ ಬಡಕುಟುಂಬಗಳಿಗೆ ಬಿಪಿಎಲ್‌ಕಾರ್ಡ್ ವಿತರಣೆ, 94ಸಿಯಲ್ಲಿ ಹಕ್ಕು ಪತ್ರ ವಿತರಣೆ, ಎಲ್ಲಕ್ಕಿಂತ ಮುಖ್ಯವಾಗಿಜನತೆಗೆ ಅನುಕೂಲವಾಗಲೆಂದು ಮಿನಿ ವಿಧಾನ ಸೌಧದ ನಿರ್ಮಾಣ, ಎಂಡೋ ಪೀಡಿತರಿಗೆ ಪುನರ್ವಸತಿ ಕೇಂದ್ರಗಳು ರಚನೆಯಾಗಿದ್ದು ತಾಲೂಕಿನ ಸಮಗ್ರ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸೇದ್ದೇನೆ, ಜನರು ನನ್ನ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇನೆ ಎಂದರು.
ಸುಮಾರು 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕಿಯನ್ನು ಇಟ್ಟುಕೊಂಡಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಬಡವರ ಸೇವೆ ಮಾಡಿದ್ದೇನೆ. 5 ಬಾರಿ ಜನ ನನ್ನನ್ನು ಶಾಸಕನನ್ನಾಗಿ ಮಾಡಿರುವುದು ಇದಕ್ಕೆ ಸಾಕ್ಷಿ. ಅಲ್ಲದೆ ಅತೀ ಹೆಚ್ಚು ಅನುದಾನ ತರಿಸಿಕೊಂಡು ವಿವಿಧ ಯೋಜನೆ ಗಳಿಗೆ ಬಳಕೆ ಮಾಡಲಾಗಿದೆ. ಎಂಡೋ ಪೀಡಿತರಿಗೆ ಪುನರ್ವಸತಿ, ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಉಜಿರೆಯ ಪುನರ್ವಸತಿ ಕೇಂದ್ರ ಉದ್ಘಾಟನೆಯಾಗಲು ಬಾಕಿ ಇದ್ದು ಅದು ಮುಂದಿನ ಅವಧಿಯಲ್ಲಿ ಕಾರ್ಯಾಚರಿಸುವಂತೆ ಮಾಡಲಾಗುವುದು. ಹೊಸಂಗಡಿ, ಕಾಶಿಪಟ್ಣ, ಕುವೆಟ್ಟು, ಬೆಳ್ತಂಗಡಿ ಪ.ಪಂ. ಸೇರಿದಂತೆ ತಾಲೂಕಿನಾದ್ಯಂತ ಸ್ವಚ್ಛತೆಗೆ ಆದ್ಯತೆ ನೀಡಿದ್ದೇನೆ. ಹೀಗಾಗಿ ಈ ಬಾರಿಯೂ ಮತದಾರರು ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ರಾಜಕೀಯದ ಯಾವುದೇ ಅನುಭವವಿಲ್ಲದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಜನತೆ ಆರಿಸಿ ಕಳುಹಿಸಿದರೆ ತಾಲೂಕಿನ ಗತಿಯೇನು ಎಂಬ ಚಿಂತೆ ಇದೆ. ಅವರಿಗೆ ಪಂಚಾಯತ್ ಸದಸ್ಯರಿಗಿರುವಷ್ಟೂ ಅನುಭವವಿಲ್ಲ. ಗೆಲ್ಲಲು ವಾಮಾಚಾರದಂತಹ ಕೆಟ್ಟ, ಅಡ್ಡದಾರಿ ಹಿಡಿದಿದ್ದಾರೆ. ಹಣದ ವಿತರಣೆ ಬಹಳಷ್ಟು ಕಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಉಜಿರೆಯಿಂದ ಗುರುವಾಯನಕೆರೆ ತನಕದ ರಸ್ತೆಯಲ್ಲಿ ವಾಹನ ಸಂಚಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಪ್ರಮುಖವಾಗಿ ಈ ರಸ್ತೆ ದ್ವಿಪಥವಾಗಲು ಶ್ರಮಿಸುತ್ತೇನೆ. ಬೈಪಾಸ್ ರಸ್ತೆ ಸರ್ವೆ ನಡೆದಿದೆ. ನಿಡಿಗಲ್‌ನಲ್ಲಿ 18 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣವಾಗುತ್ತಿದೆ ಎಂದ ಅವರು ನಮ್ಮ ತಾಲೂಕು ಬಡತನ ಮುಕ್ತ ತಾಲೂಕು ಆಗಬೇಕಲ್ಲದೆ, ಇನ್ನು ಹೆಚ್ಚು ಅನುದಾನ ತರಿಸಿಕೊಂಡು ಉಳಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇನೆ ಎಂದರು.
ಬೆಳ್ತಂಗಡಿ ತಾಲೂಕು ತುಂಬಾ ದೊಡ್ಡ ತಾಲೂಕಾಗಿದ್ದು ಇಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದರೂ ಇನ್ನೂ ನಡೆಯಬೇಕಾಗಿದೆ. ಅದಕ್ಕಾಗಿ ಮತ್ತೊಂದು ಅವಕಾಶವನ್ನು ಕೇಳುತ್ತಿದ್ದೇನೆ ಜನರು ಮತ್ತೊಮ್ಮೆ ಅವಕಾಶ ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದರು.







