ಧರ್ಮದೊಂದಿಗೆ ರಾಜಕೀಯ ಬೆರಸಲು ಸಾಧ್ಯವಿಲ್ಲ: ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಗುಲಾಂ ನಬಿ ಆಝಾದ್

ಪಡುಬಿದ್ರೆ, ಮೇ 9: ಕಾಂಗ್ರೆಸ್ ಎಂದೂ ಜಾತೀಯತೆಯನ್ನು ಪೋಷಿಸಲಾರದು. ಹಿಂದೂ, ಮುಸಲ್ಮಾನರು ಸರಸ್ಪರ ಶಾಂತಿ ಸಹಬಾಳ್ವೆಯೊಂದಿಗೆ ಸಹೋದರತೆಯಿಂದ ಈ ದೇಶದಲ್ಲಿ ಬಾಳಬೇಕು. ಧರ್ಮದೊಂದಿಗೆ ರಾಜಕೀಯವನ್ನು ಬೆರೆಸಲು ಸಾಧ್ಯವಿಲ್ಲ ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ, ಸಂಸದ ಗುಲಾಂ ನಬಿ ಆಝಾದ್ ಹೇಳಿದರು.
ಗುರುವಾರ ಪಡುಬಿದ್ರೆ ಪೇಟೆಯಲ್ಲಿ ಕಾಂಗ್ರೆಸ್ ಪರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಎಂದಿಗೂ ಧರ್ಮದ ಆಧಾರದಲ್ಲಿ ಚುನಾವಣೆಯನ್ನು ಎದುರಿಸುವುದಿಲ್ಲ. ಪಕ್ಷ ಸಿದ್ಧಾಂತ, ನೀತಿ, ನಮ್ಮ ಕಾರ್ಯಕ್ರಮಗಳು ಮತ್ತು ವಿಕಾಸದ ನೆಲೆಯಲ್ಲಿ ಚುನಾವಣೆಯನ್ನು ನಾವು ಎದುರಿಸಲಿದ್ದೇವೆ ಎಂದರು.
ಮೋದಿ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ: 70ವರ್ಷಗಳ ಬದಲಾವಣೆ: 70 ವರ್ಷಗಳ ಆಳ್ವಿಕೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತಂದು ಭಾರತ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕಾಂಗ್ರೆಸ್ ತಂದು ನಿಲ್ಲಿಸಿರುವುದರಿಂದಲೇ ಇಂದು ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ದೇಶದಲ್ಲಿನ ಮಹತ್ತರ ಬದಲಾವಣೆಗಳನ್ನು ಕಂಡೂ ಕುರುಡರಂತಿರುವ ಬಿಜೆಪಿಗರು ಅಪ್ಪಟ ಸುಳ್ಳುಗಾರರಾಗಿರುವರು.
ನಾಲ್ಕು ವರ್ಷಗಳ ಸಾಧನೆ ಏನು: ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ 2ಲಕ್ಷಗಳಷ್ಟೂ ಉದ್ಯೋಗ ಸೃಷ್ಟಿಯನ್ನು ಮಾಡಲಾಗಲಿಲ್ಲ. ದೇಶದ ಎಲ್ಲರಿಗೂ ಅವರವರ ಉಳಿತಾಯ ಖಾತೆಗಳಿಗೆ 15 ಲಕ್ಷ ಬರಲಿದೆ ಎಂದರೂ ಯಾರಿಗೂ ಸಿಗಲಿಲ್ಲ. ರೈತರಿಗೆ ಬೆಂಬಲ ಬೆಲೆಯೂ ಸಿಗಲಿಲ್ಲ. ಹಣ್ಮಕ್ಕಳಿಗೆ ಶಿಕ್ಷಣ, ಹಣ್ಬಕ್ಕಳಿಗೆ ರಕ್ಷಣೆ ಎನ್ನುವ ಸರಕಾರಕ್ಕೆ ಹೆಣ್ಮಕ್ಕಳ ಮೇಲಿನ ಅತ್ಯಾಚಾರಗಳನ್ನು ತಡೆಯಲಾಗುತ್ತಿಲ್ಲ. ನೋಟಿನ ಅಪಮೌಲ್ಯ ಮತ್ತು ಜಿಎಸ್‌ಟಿ ಕಾನೂನು ಜಾರಿಯಿಂದಾಗಿ ಉದ್ಯೋಗಪತಿಗಳು, ಸ್ವೋದ್ಯೋಗಿಗಳಿಗೆ ತೊಂದರೆಯಾಯಿತು.
ಒಂದು ಹೆಜ್ಜೆ ಮುಂದೆ ಸಿದ್ದಮಯ್ಯ ಸರ್ಕಾರ: ರಾಜ್ಯದ ಸಿದ್ಧರಾಮಯ್ಯ ಸರ್ಕಾರದ ಸಾಧನೆ ಕಣ್ಮುಂದೆ ಇರುವಾಗ ಬಿಜೆಪಿಗೆ ಮತ ನೀಡುವುದಿಲ್ಲ. ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯುಪಿಎ ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದಿರಿಸಿ ರಾಜ್ಯದ ಬಡವರಿಗೆ ಉಚಿತ ಅಕ್ಕಿ, ಗೋಧಿ, ಎಣ್ಣೆ, ಬೇಳೆ ಕಾಳುಗಳನ್ನು ನೀಡುತ್ತಿರುವುದು ಸಂತಸದ ವಿಚಾರವಾಗಿದೆ. 1.5 ಕೋಟಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು, ಮೊಟ್ಟೆಗಳನ್ನು ಸರ್ಕಾರವು ನೀಡುತ್ತಿದೆ. 8.5ಕೋಟಿ ರೂ. ಗಳ ರೈತರ ಸಾಲವನ್ನು ಸರಕಾರವು ಮನ್ನಾ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಹಣ್ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪ್ರಾಥಮಿಕ ಸ್ಥರದಿಂದ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿದೆ. ಇಷ್ಟೆಲ್ಲಾ ಇರುವಾಗ ನಮ್ಮ ಮತ ಬಿಜೆಪಿಗೆ ಹೋಗಲು ಸಾಧ್ಯವಿಲ್ಲವೆಂದೂ ಸಂಸದ ಗುಲಾಂ ನಬಿ ಅಝಾದ್ ನುಡಿದರು.
ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರವು ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ರಾಜ್ಯ ದಲ್ಲಿ ತಂದಿದೆ. ಹಸಿವು ಮುಕ್ತ ಕರ್ನಾಟಕದ ಆಶಯ ನಮ್ಮದಾಗಿತ್ತು. ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ವಿವಿಧ ಅನುದಾನಗಳನ್ನು ತಾನು ಬಳಸಿಕೊಂಡಿದ್ದೇನೆ ಎಂದರು.
ಮಾಜಿ ಶಾಸಕ ಯು. ಆರ್. ಸಭಾಪತಿ, ಮಂಜೇಶ್ವರ ಶಾಸಕ ಅಬ್ದುಲ್ ರಜಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ. ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಅಶೋಕ್ ಕೊಡವೂರು, ಗೀತಾ ವಾಗ್ಳೆ, ಎಂ. ಪಿ. ಮೊದಿನಬ್ಬ, ರಾಜಶೇಖರ ಕೋಟ್ಯಾನ್, ಅಬ್ದುಲ್ ಅಝೀಝ್ ಹೆಜಮಾಡಿ, ದಿನೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ದಮಯಂತಿ ಅಮೀನ್ ವಿಜಯ ಅಮೀನ್, ಮುಹಮ್ಮದ್ ಫಾರೂಕ್ ಚಂದ್ರನಗರ, ದಮಯಂತಿ ಅಮೀನ್, ವಿಜಯ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.







