ಕಾರ್ಕಳ: ಮುನಿಯಾಲು ಉದಯಕುಮಾರ್‌ರಿಂದ ಮತಯಾಚನೆ

ಹೆಬ್ರಿ, ಮೇ 9: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್.ಗೋಪಾಲ ಭಂಡಾರಿ ಪರವಾಗಿ ಮಂಗಳವಾರ ಕ್ಷೇತ್ರದ ಅನೇಕ ಕಡೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಮಾಳ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ಹೆಗ್ಡೆ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪ್ರಮುಖರು ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರ ಬೆಂಬಲಕ್ಕೆ ಕರೆ: ಮಹಿಳೆಯರು ಸೇರಿದಂತೆ ಜನಸಾಮಾನ್ಯ ರಿಗೆ ಹಲವು ಜನಪರ ಯೋಜನೆಗಳನ್ನು ರೂಪಿಸಿ ಅತ್ಯುತ್ತಮ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷ ಮತ್ತು ಜನಸಾಮಾನ್ಯರ ಬಗ್ಗೆ ಸದಾ ಕಾಳಜಿ ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಹೆಬ್ರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್ ಮನವಿ ಮಾಡಿದ್ದಾರೆ.
ಕರ್ನಾಟಕದ ಜನತೆ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂದು ಅನ್ನಭಾಗ್ಯ ನೀಡಿದ ಸಿದ್ದರಾಮಯ್ಯರನ್ನು ಎಂದೂ ಯಾರೂ ಮರೆಯಲು ಸಾಧ್ಯವಿಲ್ಲ. ಅತೀ ಸುಲಭದಲ್ಲಿ ಪಡಿತರ ಚೀಟಿ ದೊರೆಯುವಂತೆ ಮಾಡಿರುವುದು, ಗ್ರಾಪಂನಲ್ಲೇ ಆದಾಯ ಪ್ರಮಾಣ ಪತ್ರ, ಆರ್‌ಟಿಸಿ ದೊರೆಯುವಂತಾಗಿರುವುದು, ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಗೆ ಕಡಿವಾಣ ಇವೆಲ್ಲವೂ ಸಿದ್ಧರಾಮಯ್ಯ ಸರಕಾರದ ಸಾಧನೆಗಳಾಗಿವೆ ಎಂದವರು ನುಡಿದರು.
ಮಹಿಳೆಯರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತಹ ಯೋಜನೆ ಯನ್ನು ಜಾರಿಗೆ ತಂದಿರುವ ಕಾಂಗ್ರೆಸನ್ನು ಬೆಂಬಲಿಸುವಂತೆ ಸುಜಾತ ಲಕ್ಷ್ಮಣ್ ಮನವಿ ಮಾಡಿದ್ದಾರೆ.







