ಸಾಂಪ್ರದಾಯಿಕ ಉಡುಪಿನಲ್ಲೆ ಮತಗಟ್ಟೆಗೆ ಬನ್ನಿ: ಆದಿವಾಸಿಗಳಿಗೆ ಚುನಾವಣಾ ಆಯೋಗದ ಮನವಿ
ಬುಡಕಟ್ಟು ಮತದಾರರಿಗೆ ‘ಸಾಂಪ್ರದಾಯಿಕ ಮತಗಟ್ಟೆ’

ಬೆಂಗಳೂರು, ಮೇ 9: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜ ನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ 8 ಜಿಲ್ಲೆಗಳಲ್ಲಿ ಆದಿವಾಸಿ, ಬುಡಕಟ್ಟು ಜನಾಂಗದ ಮತದಾರರ ಆಕರ್ಷಣೆಗೆ ವಿಶಿಷ್ಟ ಸಂಪ್ರದಾಯಗಳನ್ನು ಬಿಂಬಿಸುವ 28 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಗಾಂಧಿ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 6.10 ಕೋಟಿ ಮತದಾರರ ಪೈಕಿ ಎರವ, ಪಣಿಯ, ಹಕ್ಕಿಪಿಕ್ಕಿ, ಗೌಡ್ಲು, ಹಸಲರು, ಕಾಡುಕುರುಬ, ಜೇನುಕುರುಬ, ಕೊರಗ, ಮಲೆಕುಡಿಯ, ಸಿದ್ಧಿ ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಆದಿವಾಸಿಗಳಿದ್ದಾರೆ. ಆ ಪೈಕಿ 2.58 ಲಕ್ಷಕ್ಕೂ ಅಧಿಕ ಮಹಿಳೆಯರು ಮತ್ತು 2.56 ಲಕ್ಷಕ್ಕೂ ಅಧಿಕ ಪುರುಷರು ಸೇರಿದಂತೆ ಒಟ್ಟು 5.15 ಲಕ್ಷ ಆದಿವಾಸಿ, ಬುಡಕಟ್ಟು ಮತದಾರರಿದ್ದಾರೆ. ಹೊಸದಾಗಿ 18 ವರ್ಷ ತುಂಬಿದ ಒಟ್ಟು 3,559 ಮಂದಿ ಯುವ ಮತದಾರರಿದ್ದು, ಅವರೆಲ್ಲರೂ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಚಾಮರಾಜನಗರ-4, ಉಡುಪಿ-3, ಕೊಡಗು-4, ಉತ್ತರ ಕನ್ನಡ-4, ದಕ್ಷಿಣ ಕನ್ನಡ-3, ಮೈಸೂರು-4, ಶಿವಮೊಗ್ಗ-2 ಹಾಗೂ ಚಿಕ್ಕಮಗಳೂರು-4 ಸೇರಿದಂತೆ ಒಟ್ಟು 28 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಇದೇ ವೇಳೆ ವಿವರ ನೀಡಿದರು.
ಹಾಡಿಗಳಲ್ಲಿ ವಾಸ ಮಾಡುವ ಗಿರಿಜನ, ಅಲೆಮಾರಿ, ಅರೆಅಲೆಮಾರಿ ಜನಾಂಗದ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಸಂಘ-ಸಂಸ್ಥೆಗಳ ಮೂಲಕವೂ ಆದಿವಾಸಿಗಳಲ್ಲಿ ಮತದಾನ ಉತ್ತೇಜನಕ್ಕೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುನ್ಮಾನ ಮತ ಯಂತ್ರ(ಇವಿಎಂ), ವಿವಿ ಪ್ಯಾಟ್‌ಗಳ ಹಾಗೂ ನೋಟಾ ಬಗ್ಗೆ ಬುಡಕಟ್ಟು ಭಾಷೆಯಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ. ಅಲ್ಲದೆ, ಆದಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ 2 ಕಿ.ಮೀ ಒಳಗೆ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.







