ವ್ಯಕ್ತಿಯ ಹತ್ಯೆಗೈದು ದೇಹ ತುಂಡರಿಸಿದ ಪ್ರಕರಣ: ಪತ್ನಿ, ಮೂವರು ಸ್ನೇಹಿತರ ಬಂಧನ

ಸಾಂದರ್ಭಿಕ ಚಿತ್ರ
ಪಣಜಿ,ಮೇ 9: ಮಹಿಳೆಯೋರ್ವಳು ತನ್ನ ಪತಿಯನ್ನು ಹತ್ಯೆಗೈದು,ಬಳಿಕ ಆತನ ಮೂವರು ಸ್ನೇಹಿತರ ಸಹಾಯದಿಂದ ಶವವನ್ನು ಮೂರು ತುಂಡುಗಳನ್ನಾಗಿ ಮಾಡಿ ಅರಣ್ಯಪ್ರದೇಶದಲ್ಲಿ ಎಸೆದಿದ್ದ ಘಟನೆ ದಕ್ಷಿಣ ಗೋವಾದ ಕರ್ಚೊರೆಮ್ನಲ್ಲ್ಲಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯೋರ್ವನ ಪತ್ನಿಯು ತನ್ನ ಪತಿಯ ವರ್ತನೆಯಲ್ಲಿ ಶಂಕಾಸ್ಪದ ಬದಲಾವಣೆಯನ್ನು ಗಮನಿಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಳು. ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ಕರಾಳ ಕೃತ್ಯ ಬೆಳಕಿಗೆ ಬಂದಿದೆ. ಹತ ವ್ಯಕ್ತಿಯ ಪತ್ನಿ ಕಲ್ಪನಾ ಬಸು(31) ಮತ್ತು ಆತನ ಮೂವರು ಸ್ನೇಹಿತರಾದ ಸುರೇಶ್ ಕುಮಾರ್,ಅಬ್ದುಲ್ ಕರೀಂ ಮತ್ತು ಪಂಕಜ್ ಪವಾರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ಕೂಲಿ ಕಾರ್ಮಿಕ ಬಸು ಬಸವರಾಜ(38) ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳೊಂದಿಗೆ ಕರ್ಚೊರೆಮ್ನಲ್ಲಿ ವಾಸವಾಗಿದ್ದು,ಕೂಲಿ ಕೆಲಸ ಮಾಡಿ ಸಂಸಾರವನ್ನು ನಿರ್ವಹಿಸುತ್ತಿದ್ದ. ಸುಮಾರು ಒಂದು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಬಸು ಜೊತೆ ಜಗಳವಾಡಿದ್ದ ಕಲ್ಪನಾ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ತನ್ನ ಕೃತ್ಯದ ಬಗ್ಗೆ ಕಲ್ಪನಾ ಇತರ ಆರೋಪಿಗಳಿಗೆ ತಿಳಿಸಿದಾಗ ಶವವನ್ನು ವಿಲೇವಾರಿ ಮಾಡಲು ಆಕೆಗೆ ನೆರವಾಗಿದ್ದರು. ನಾಲ್ವರೂ ಸೇರಿ ಶವವನ್ನು ಮೂರು ತುಂಡುಗಳನ್ನಾಗಿ ಮಾಡಿ ಗೋಣಿಚೀಲದಲ್ಲಿ ತುಂಬಿ ಕಾರೊಂದರಲ್ಲಿ ಗೋವಾ-ಕರ್ನಾಟಕ ಗಡಿಯ ಅರಣ್ಯ ಪ್ರದೇಶಕ್ಕೆ ಒಯ್ದು ಅಲ್ಲಿ ಎಸೆದಿದ್ದರು.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಸದ್ರಿ ಅರಣ್ಯ ಪ್ರದೇಶಕ್ಕೆ ತೆರಳಿದ ಪೊಲೀಸರು ಶವದ ಅವಶೇಷಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರವೀಂದ್ರ ದೇಸಾಯಿ ತಿಳಿಸಿದರು.
ಅಪರಾಧದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದರೇ ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ವ್ಯಾಪಕ ತನಿಖೆಯನ್ನು ಕೈಗೊಂಡಿದ್ದಾರೆ.







