ಬಿಜೆಪಿಗರ ನಿವಾಸದ ಮೇಲೆ ಐಟಿ ದಾಳಿ: ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು ?

ಮೈಸೂರು,ಮೇ.9: ಕಾಂಗ್ರೆಸ್ ಕಾರ್ಯಕರ್ತರ ರೆಸಾರ್ಟ್, ನಿವಾಸದ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದನ್ನು ಮರೆಮಾಚಲು ಬಿಜೆಪಿಯವರ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದ ಎದುರು ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಬೆಂಬಲಿಗರ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ರಾಜಕೀಯ ಪ್ರೇರಿತ ಎನ್ನುವುದನ್ನು ಮರೆಮಾಚುವುದಕ್ಕಾಗಿದೆ. ಉದ್ದೇಶ ಪೂರ್ವಕವಾಗಿ ರಾಜಕೀಯ ಹಿನ್ನೆಲೆಯಲ್ಲಿ ಬಿಜೆಪಿಗರ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದನ್ನು ಮರೆಮಾಚುವುದಕ್ಕೆ ಯತ್ನಿಸಲಾಗಿದೆ. ಅಪವಾದದಿಂದ ತಪ್ಪಿಸಿಕೊಳ್ಳಲು ಈ ರೀತಿಯ ಐಟಿ ದಾಳಿ ನಡೆಯುತ್ತಿದೆ. ನಾನು ಹನ್ನೆರಡು ಚುನಾವಣೆಗಳನ್ನು ನೋಡಿದ್ದೇನೆ. ಯಾವ ಕಾಲದಲ್ಲೂ ಚುನಾವಣೆ ವೇಳೆ ಹೀಗೆ ನಡೆದಿರಲಿಲ್ಲ. ನಮ್ಮ ನಾಯಕರು ಉಳಿದುಕೊಂಡಿರುವ ಕೊಠಡಿಗಳ ಮೇಲೆಯೇ ಅಧಿಕ ಐಟಿ ರೈಡ್ ಆಗಿದೆ ಎಂದರು.
ಬೆಂಗಳೂರಿನ ಆರ್ ಆರ್ ನಗರದಲ್ಲಿ ನಕಲಿ ಓಟರ್ ಐಡಿಗಳು ಪತ್ತೆಯಾದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಚುನಾವಣಾಧಿಕಾರಿಗಳು ಆ ಬಗ್ಗೆ ತನಿಖೆ ಮಾಡಲಿ ಎಂದರು.
ಅನಂತ್ ಕುಮಾರ್ ಮಾತನ್ನು ಅಷ್ಟು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಕಾರಣಕ್ಕೆ ಚುನಾವಣೆ ಮುಂದೂಡಬೇಕು ಎನ್ನುವುದರಲ್ಲಿ ಅರ್ಥವಿಲ್ಲ ಎಂದರು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸುದೀಪ್ ಪ್ರಚಾರಕ್ಕೆ ಬಾರದಿರುವುದಕ್ಕೆ ಪ್ರತಿಕ್ರಿಯಿಸಿ, 'ಸುದೀಪ್ ಬರುತ್ತೇನೆ ಎಂದು ಹೇಳಿದ್ದರು. ಆದರೆ ಬೇರೆ ಏನೋ ಕೆಲಸವಿದ್ದುದರಿಂದ ಬರುತ್ತಿಲ್ಲ' ಎಂದು ತಿಳಿಸಿದ್ದಾರೆ ಎಂದರು.







