18ರ ಕೆಳಹರೆಯದವರಿಗೆ ಇಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಅವಕಾಶ : ಕೇಂದ್ರದ ಚಿಂತನೆ

ಹೊಸದಿಲ್ಲಿ, ಮೇ 9: ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 16ರಿಂದ 18ರ ವಯೋಮಾನದ ಯುವಜನರಿಗೆ ಇಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಅವಕಾಶ ನೀಡುವ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಲ್ಲದೆ ದೇಶದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ನೀಡಲು ನಿರ್ಧರಿಸಲಾಗಿದ್ದು, ಈ ಕುರಿತ ಅಧಿಸೂಚನೆ ವಾರದೊಳಗೆ ಪ್ರಕಟವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಖಾಸಗಿ ಇಲೆಕ್ಟ್ರಿಕ್ ಕಾರುಗಳು ಹಸಿರು ನಂಬರ್ ಪ್ಲೇಟ್‌ನಲ್ಲಿ ಬಿಳಿ ಬಣ್ಣದಲ್ಲಿ ನಂಬರ್‌ಗಳನ್ನು ಬರೆಯಬೇಕು. ಟ್ಯಾಕ್ಸಿಗಳು ಹಳದಿ ಬಣ್ಣದಲ್ಲಿ ನಂಬರ್‌ಗಳನ್ನು ಹೊಂದಿರಬೇಕು. ಟ್ಯಾಕ್ಸಿ ಸಂಘಟನೆಗಳು ನಿರ್ದಿಷ್ಟ ಪ್ರಮಾಣದ ಇಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲು ಸರಕಾರ ನಿರ್ಧರಿಸಿದೆ ಎಂದವರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಡೀಸೆಲ್ ದರದ ಬಗ್ಗೆ ಹಾಗೂ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಸರಕಾರ ಅಸಹಾಯಕತೆ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್, ದೇಶದಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸರಕಾರ ಪ್ರೋತ್ಸಾಹಿಸಬೇಕು ಎಂದು ಮೇ 2ರಂದು ಸಲಹೆ ನೀಡಿತ್ತು. ಅಲ್ಲದೆ ಕಾರು ಉತ್ಪಾದಕರು ವಿದ್ಯುತ್ ಚಲನಶೀಲತೆಗೆ ಬದಲಾಯಿಸಿಕೊಳ್ಳುವಂತೆ ತಿಳಿಸಿತ್ತು. ಇದಕ್ಕೆ ಉತ್ತರಿಸಿದ್ದ ಸರಕಾರ, ವಿವಿಧ ಸಂಸ್ಥೆಗಳು ಉತ್ಪಾದಿಸಿದ ಸುಮಾರು 22ಇಲೆಕ್ಟ್ರಿಕ್ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದು ತಿಳಿಸಿದೆ. ಹೊಸದಿಲ್ಲಿಯಲ್ಲಿರುವ ನೀತಿ ಆಯೋಗದ ಕಟ್ಟಡ ಸಮುಚ್ಛಯದಲ್ಲಿ ಕಳೆದ ಫೆಬ್ರವರಿಯಲ್ಲಿ ಇಲೆಕ್ಟ್ರಾನಿಕ್ಸ್ ವಾಹನಗಳ ಬ್ಯಾಟರಿ ಚಾಜಿರ್ಂಗ್ ಕೇಂದ್ರವನ್ನು ಸಚಿವ ಗಡ್ಕರಿ ಉದ್ಘಾಟಿಸಿದ್ದರು.







