ಮಹಾರಾಣಾ ಪ್ರತಾಪ್ ಜಯಂತಿಗೆ ಮುನ್ನ ಭೀಮ್ ಆರ್ಮಿ ನಾಯಕನ ಸೋದರನ ಹತ್ಯೆ
ಸಹಾರಾನ್ಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

ಲಕ್ನೋ,ಮೇ 9: ಸಹಾರನಪುರದಲ್ಲಿ ಭೀಮ್ ಆರ್ಮಿಯ ನಾಯಕ ಕಮಲ್ ವಾಲಿಯಾ ಅವರ ಸೋದರ ಸಚಿನ್ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದು,ನಗರದಲ್ಲಿ ಕ್ಷಣಕ್ಷಣಕ್ಕೂ ಉದ್ವಿಗ್ನತೆ ಹೆಚ್ಚುತ್ತಿದೆ.
ಮಹಾರಾಣಾ ಪ್ರತಾಪ್ ಜಯಂತಿಯನ್ನು ಆಚರಿಸುವುದರ ವಿರುದ್ಧ ಭೀಮ್ ಆರ್ಮಿಯು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಹಾರಾಣಾ ಪ್ರತಾಪ್ ಭವನದಲ್ಲಿ ಭದ್ರತೆಗಾಗಿ ಸುಮಾರು 800 ಪೊಲೀಸರನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಜಿಲ್ಲಾಡಳಿತವು ಜಯಂತಿ ಆಚರಣೆಯಲ್ಲಿ ಕೇವಲ 200 ಜನರು ಭಾಗವಹಿಸಲು ಅನುಮತಿ ನೀಡಿತ್ತು.
ಜಯಂತಿ ಆಚರಣೆಗೆ ಅನುಮತಿ ನೀಡುವ ಮೂಲಕ ಜಿಲ್ಲಾಡಳಿತವು ಸಚಿನ್ ಹತ್ಯೆಗೆ ಕಾರಣವಾಗಿದೆ ಎಂದು ಮೃತನ ಕುಟುಂಬವು ಆರೋಪಿಸಿದೆ. ಕಳೆದ ವರ್ಷ ಮಹಾರಾಣಾ ಪ್ರತಾಪ್ ಜಯಂತಿ ಆಚರಣೆ ಸಂದರ್ಭದಲ್ಲಿ ದಲಿತರು ಮತ್ತು ರಜಪೂತರ ಮಧ್ಯೆ ಘರ್ಷಣೆಗಳು ಸಂಭವಿಸಿದ್ದು,ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಓರ್ವ ಹೆಡ್ ಕಾನ್‌ಸ್ಟೇಬಲ್ ಸೇರಿದಂತೆ 16 ಜನರು ಗಾಯಗೊಂಡಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಸಹಾರಾನ್ಪುರದಲ್ಲಿ ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಸಚಿನ್ ತನ್ನ ನಿವಾಸದಲ್ಲಿ ಗನ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾನೆ. ಘಟನೆಗೆ ಬೇರೆ ಬಣ್ಣ ನೀಡಲು ಆತನ ಕುಟುಂಬವು ಪ್ರಯತ್ನಿಸುತ್ತಿದೆ ಎಂದು ಸಹರಾನಪುರ ಎಸ್‌ಎಸ್‌ಪಿ ಹೇಳಿದರು.
ಕಳೆದ ವರ್ಷ ಠಾಕೂರ್ ಸಮುದಾಯದ ನೇತೃತ್ವದ ಮೆರವಣಿಗೆಯು ಸ್ಥಳೀಯಾಡಳಿತದ ಪೂರ್ವಾನುಮತಿ ಪಡೆದುಕೊಳ್ಳದೆ ತಮ್ಮ ಸಮುದಾಯದ ಸಂತ ರವಿದಾಸ ದೇವಸ್ಥಾನದ ಮೂಲಕ ಹಾದು ಹೋಗುವುದನ್ನು ದಲಿತರು ಪ್ರತಿಭಟಿಸಿದ ಬಳಿಕ ಶಬ್ಬೀರಪುರ ಮತ್ತು ಸಿಮ್ಲಾನಾ ಗ್ರಾಮಗಳಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿತ್ತು. ಈ ಸಂದರ್ಭ ಉಭಯ ಸಮುದಾಯಗಳ ಮಧ್ಯೆ ಘರ್ಷಣೆಗಳು ನಡೆದಿದ್ದು, ಶಬ್ಬೀರಪುರದಲ್ಲಿ ಠಾಕೂರರು ದಲಿತರ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದರು.
ಉದ್ವಿಗ್ನತೆಯನ್ನು ಶಮನಿಸುವುದು ಸದ್ಯಕ್ಕೆ ಆಡಳಿತದ ಮುಂದಿರುವ ಸವಾಲು ಆಗಿದೆ. ಸದರ್ ಬಝಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಹಿಪುರ ರೋಡ್ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ.
ಕಳೆದ ವರ್ಷದ ಘರ್ಷಣೆಗಳ ಹಿನ್ನೆಲೆಯಲ್ಲಿ ಈ ವರ್ಷ ಮಹಾರಾಣಾ ಪ್ರತಾಪ್ ಜಯಂತಿ ಆಚರಣೆಗೆ ಅನುಮತಿ ನೀಡಲು ಜಿಲ್ಲಾಡಳಿತವು ಮೊದಲು ನಿರಾಕರಿಸಿತ್ತಾದರೂ,ತಾವು ಕೈರಾನಾ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಠಾಕೂರರು ಬೆದರಿಕೆಯೊಡ್ಡಿದಾಗ ಅವರ ಬೇಡಿಕೆಗೆ ಮಣಿದಿತ್ತು.







