ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿರುವ ಚುನಾವಣಾಧಿಕಾರಿ: ಆರೋಪ
ಬೆಂಗಳೂರು, ಮೇ 9: ನಗರದ ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚುನಾವಣಾಧಿಕಾರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಸಿ.ಎಸ್.ರಘು ಆರೋಪಿಸಿದ್ದಾರೆ.
ಬುಧವಾರ ನಗರದ ಮೈಸೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬ್ಯಾಟರಾಯನಪುರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಸಂಬಂಧಿಸಿದವರ ಗಮನಕ್ಕೆ ತಂದ್ದಿದ್ದೇವೆ. ಆದರೂ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆಯ ಪ್ರಕಾರ ಯಾವುದೇ ಮತದಾರರ ವೈಯಕ್ತಿಕ ವಿವರಗಳನ್ನು ಚುನಾವಣಾ ಅಭ್ಯರ್ಥಿಗಳು ಬಳಕೆ ಮಾಡುವಂತಿಲ್ಲ. ಆದರೂ ಸ್ಪರ್ಧಿಗಳು ತಮ್ಮದೇ ಆದಂತಹ ಆ್ಯಪ್‌ಗಳನ್ನು ಸಿದ್ಧಪಡಿಸಿಕೊಂಡು ಈ ಆ್ಯಪ್‌ನಲ್ಲಿ ಎಲ್ಲ ಮತದಾರರ ಮಾಹಿತಿಗಳು ಸ್ವಯಂ ಚಾಲಿತವಾಗಿ ಬರುವಂತೆ ಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರದಲ್ಲಿ ಸುಮಾರು ನಾಲ್ಕು ಲಕ್ಷ ಮತದಾರರಿದ್ದಾರೆ. ಇವೆಲ್ಲವೂ ಸಹ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಜಾಣ ಕುರುಡುತನವನ್ನು ತೋರಿಸುತ್ತಿದ್ದಾರೆ. ಹಾಗಾಗಿ ಪ್ರಾಮಾಣಿಕ ಚುನಾವಣೆ ನಡೆಯುವುದು ಬಹಳ ಅನುವಾನವಾಗಿದೆ ಎಂದು ಅವರು ತಿಳಿಸಿದರು.







