ನಕಲಿ ಮತದಾರರ ಸೇರ್ಪಡೆ, ಕ್ರಮಕ್ಕೆ ಒತ್ತಾಯ: ಸಿಪಿಎಂ
ಮಂಗಳೂರು, ಮೇ 9: ವಿವಿಧ ವಾರ್ಡ್‌ಗಳಲ್ಲಿ ನಕಲಿ ಮತದಾರರು ಸೇರ್ಪಡೆಗೊಂಡಿದ್ದು, ಇಂತಹ ನಕಲಿ ಮತದಾರರನ್ನು ಕೈಬಿಟ್ಟು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಒತ್ತಾಯಿಸಿದೆ.
203ನೇ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಸಾವಿರಾರು ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ. 38 ವಾರ್ಡ್‌ಗಳನ್ನೊಳಗೊಂಡ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಗರದ ಹೃದಯ ಭಾಗದ ಪ್ರಮುಖ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ಸಾವಿರಾರು ಮತದಾರರು ಒಂದೇ ಮನೆ ನಂಬ್ರದಲ್ಲಿ ದಾಖಲಾಗಿರುವುದು ಕಂಡು ಬರುತ್ತದೆ. 40ನೆ ಕೋರ್ಟ್ ವಾರ್ಡ್, 39ನೇ ಪಳ್ನೀರು, 38ನೆ ಬೆಂದೂರು, 48 ಕಂಕನಾಡಿ ಮತ್ತು 47ನೆ ಮಿಲಾಗ್ರಿಸ್ ವಾರ್ಡ್‌ಗಳ ಪಟ್ಟಿ ಪರಿಶೀಲಿಸಿದಾಗ ಈ ರೀತಿ ನಕಲಿ ಮತದಾರರನ್ನು ಸೇರಿಸಿದ್ದು ಇದು ಉದ್ದೇಶಪೂರ್ವಕವಾಗಿದೆ. ಒಂದೇ ಮನೆ ನಂಬ್ರದಲ್ಲಿ ಮತದಾರರನ್ನು ಪಟ್ಟಿಗೆ ಸೇರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶಾಮೀಲಾತಿಯಲ್ಲೇ ನಡೆದಿದೆ. 38 ವಾರ್ಡ್‌ಗಳ ಪೈಕಿ 5 ವಾರ್ಡ್‌ಗಳ ಸಮೀಕ್ಷೆಯಲ್ಲಿ ಈ ರೀತಿ ಸಾವಿರಾರು ನಕಲಿ ಮತದಾರರು ಮೇಲ್ನೋಟಕ್ಕೆ ಕಾಣುತ್ತಿದ್ದು ಇಡೀ 203ನೇ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇದು ದೊಡ್ಡ ಸಂಖ್ಯೆಯಲ್ಲಿ ಇರುವ ಸಾಧ್ಯತೆ ಇದ್ದು ಅಂತಹ ಮತದಾರರನ್ನು ಕೈಬಿಡಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಇದರೊಂದಿಗೆ ಶಾಮೀಲಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.





