ದೇಶವನ್ನು ಮೋದಿಯಿಂದ, ಕರ್ನಾಟಕವನ್ನು ಸಿದ್ದರಾಮಯ್ಯರಿಂದ ರಕ್ಷಣೆ ಮಾಡಬೇಕಿದೆ: ಅಸಾದುದ್ದೀನ್ ಉವೈಸಿ

ದಾವಣಗೆರೆ,ಮೇ.09: ದೇಶವನ್ನು ಮೋದಿಯಿಂದ, ಕರ್ನಾಟಕವನ್ನು ಸಿಎಂ ಸಿದ್ದರಾಮಯ್ಯ ಅವರಿಂದ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜನತೆ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಆದ್ಯತೆ ನೀಡುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸಿ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಕರೆ ನೀಡಿದರು.
ಬುಧವಾರ ಇಲ್ಲಿನ ಬೂದಾಳ್ ರಸ್ತೆಯ ಬಿಎನ್ ಲೇಔಟ್‍ನ ತಾಜ್ ಪ್ಯಾಲೇಸ್ ಬಳಿ ಜೆಡಿಎಸ್ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್, ಬಿಜೆಪಿಯಿಂದ ಸಾಮಾಜಿಕ ನ್ಯಾಯ ವಂಚಿತ ದಲಿತ, ಅಲ್ಪಸಂಖ್ಯಾತರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಹಾಗೂ ಟಿಪ್ಪುಸುಲ್ತಾನ್ ವಿಶ್ವವಿದ್ಯಾನಿಲಯ ಸ್ಥಾಪಿಸುವ ಭರವಸೆ ನೀಡಿರುವ ಜೆಡಿಎಸ್ ಪಕ್ಷಕ್ಕೆ ಮತ ನೀಡಿ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದಲೂ ದೇಶಕ್ಕೆ ಅಪಾಯವಿದ್ದು, ಇಂತಹ ಪಕ್ಷ ತಿರಸ್ಕರಿಸುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ಬೆಂಬಲಿಸಬೇಕು ಎಂದರು.
ಟಿಪ್ಪು ಜಯಂತಿ ಆಚರಿಸಿದ್ದೇ ದೊಡ್ಡ ಸಾಧನೆಯೆಂಬಂತೆ ಮುಸ್ಲಿಂ ಸಮುದಾಯಕ್ಕೆ ಏನೋ ದೊಡ್ಡ ಕೊಡುಗೆ ನೀಡಿದಂತೆ ಇಲ್ಲಿನ ಸಿಎಂ ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಸಿದ್ದರಾಮಯ್ಯಗೆ ಅಷ್ಟೊಂದು ಬದ್ಧತೆ ಇದ್ದಿದ್ದರೆ ಈ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ನ್ಯಾಯ ಏಕೆ ಕೊಡಲಿಲ್ಲ? ಕಾಂಗ್ರೆಸ್ ಆಳ್ವಿಕೆಯಲ್ಲಿ ಮುಸ್ಲಿಮರ ಸ್ಥಿತಿಗತಿ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ನಾಯಕರೆನಿಸಿಕೊಂಡವರು ನೋಡಲಿ ಎಂದರು.
ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಂದ ಈ ರಾಜ್ಯಕ್ಕಾಗಲೀ, ರಾಷ್ಟ್ರಕ್ಕಾಗಲೀ ಯಾವುದೇ ಅನುಕೂಲವಿಲ್ಲ. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಸೇರಿದಂತೆ ರಾಜ್ಯಾದ್ಯಂತ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಬೆಂಬಲಿಸಿ, ಮತ ನೀಡಿ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ದಲಿತರಿಗೆ, ಮುಸ್ಲಿಂ ಸಮುದಾಯದವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಟಿಪ್ಪು ಸುಲ್ತಾನ್ ವಿಶ್ವವಿದ್ಯಾನಿಲಯ ಸ್ಥಾಪಿಸುವ ಭರವಸೆ ನೀಡಿದ್ದು, ಜೆಡಿಎಸ್‍ನ್ನು ಬೆಂಬಲಿಸಿ ಎಂದರು.
ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ಗಲಭೆ, ಘರ್ಷಣೆ, ಹಿಂಸಾಚಾರ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. ದೇಶದಲ್ಲೇ ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದರೆ, ಕೋಮುಗಲಭೆ, ಆಸ್ತಿಪಾಸ್ತಿ ಹಾನಿ, ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವ 2ನೇ ರಾಜ್ಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯ ಕರ್ನಾಟಕವಾಗಿದೆ ಎಂದರು.
ಹಣದ ಆಮಿಷಕ್ಕೊಳಗಾಗದೇ ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು. ಹಣಕ್ಕಾಗಿ ನಿಮ್ಮ ಅಮೂಲ್ಯ ಮತ ಮಾರಿಕೊಂಡು, ಪ್ರಜಾಪ್ರಭುತ್ವ ಕಗ್ಗೊಲೆ ಮಾಡಬೇಡಿ. ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾಗೆ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್, ಜಿಲ್ಲಾಧ್ಯಕ್ಷ ಯು.ಎಂ. ಮನ್ಸೂರ್ ಅಲಿ, ಗಣೇಶ ದಾಸಕರಿಯಪ್ಪ, ಕಡತಿ ಅಂಜಿನಪ್ಪ, ಎಂ. ಅಂಜನಿ, ಎಂ. ರಾಜಾಸಾಬ್, ಮೌಲಾನಾ ಅಬ್ದುಲ್ ಮುನಾಫ್, ಅಲ್ಲಾಭಕ್ಷಿ, ಖಾದರ್, ಹುಸೇನ್ ಸಾಬ್, ಶಾಹೀದ್, ಯ.ಎಂ. ಮನ್ಸೂರ್ ಹೈದರ್ ಅಲಿ, ಟಿ. ಅಸ್ಗರ್, ಸಮೀರ್ ಅಹಮ್ಮದ್, ಹುಸೇನ್, ಬ್ಯಾಟರಿ ಜಬೀ, ನಾಸೀರ್ ಹುಸೇನ್, ಸಲೀಂ ಖಾನ್ ಇದ್ದರು.







