ಸಿದ್ದರಾಮಯ್ಯರನ್ನು ಎದುರಿಸಲು ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಸಮರ್ಥ ನಾಯಕರಿಲ್ಲ: ರಾಜ್ ಬಬ್ಬರ್
ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರೋಡ್ ಶೋ

ಚಿಕ್ಕಮಗಳೂರು, ಮೇ 10: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರನ್ನು ಎದುರಿಸಲು ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಸಮರ್ಥ ನಾಯಕರಿಲ್ಲ. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಬಿಜೆಪಿ ಮುಖಂಡರು ಪ್ರಚಾರಕ್ಕೆ ಕರೆ ತಂದಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ಒಬ್ಬರೇ ನಾಯಕ ಎಂಬಂತಾಗಿದ್ದು, ಬಿಜೆಪಿ ಈಗಾಗಲೇ ಚುನಾವಣೆಗೂ ಮುನ್ನ ಸೋಲನ್ನು ಒಪ್ಪಿಕೊಂಡಿದೆ ಎಂದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಹಾಗೂ ಉತ್ತರ ಪ್ರದೇಶದ ಮಾಜಿ ಸಂಸದ ರಾಜ್ ಬಬ್ಬರ್ ಟೀಕಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಕೊನೆಯ ದಿನದ ಬಹಿರಂಗ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಪರವಾಗಿ ನಡೆದ ರೋಡ್ ಶೋ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಬಿಜೆಪಿ ಪರ ಚುನಾವಣೆ ಎದುರಿಸುವಂತಹ ಓರ್ವ ನಾಯಕನೂ ಇಲ್ಲದಂತಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜಾರಿ ಮಾಡಿರುವ ಜನಪರ ಯೋಜನೆಗಳು ಪ್ರತೀ ಜನರನ್ನು ತಲುಪಿರುವುದರಿಂದ ರಾಜ್ಯದ ಮೂಲೆ ಮೂಲೆಯಲ್ಲೂ ಕಾಂಗ್ರೆಸ್ ಪರ ಮತದಾರರು ಒಲವು ತೋರುತ್ತಿದ್ದಾರೆ ಎಂದರು.
ಚಿಕ್ಕಮಗಳೂರಿನಲ್ಲಿ ಪ್ರಧಾನಿ ಪ್ರಚಾರ ಕಾರ್ಯಕ್ರಮ ಇರಲೇ ಇಲ್ಲ. ಆದರೆ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಅವರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ಪ್ರಚಾರ ಮಾಡಿದ್ದಾರೆ. ಇದು ಜನರ ಮನಸ್ಸಿಗೆ ನಾಟಿದೆ. ಹಾಗಾಗಿ ಹಳ್ಳಿಹಳ್ಳಿಗಳಲ್ಲೂ ಜನತೆ ಕಾಂಗ್ರೆಸ್ ಅಭ್ಯರ್ಥಿ ಪರ ಮಾತನಾಡುತ್ತಿದ್ದಾರೆ. ಇದು ಇಲ್ಲಿನ ಬಿಜೆಪಿ ಶಾಸಕ ಹಾಗೂ ಮುಖಂಡರಲ್ಲಿ ಸೋಲಿನ ಭೀತಿ ಮೂಡಿಸಿದೆ. ಈ ಕಾರಣಕ್ಕೆ ಪ್ರಧಾನಿ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಿ ಇಲ್ಲದಿದ್ದರೂ ಕೊನೆ ಗಳಿಗೆಯಲ್ಲಿ ಪ್ರಧಾನಿ ಅವರನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ. ಆದರೆ ಪ್ರಧಾನಿ ಅವರ ಮಾತು ನಂಬುವಷ್ಟು ದಡ್ಡರು ಚಿಕ್ಕಮಗಳೂರಿನವರಲ್ಲ. ಮೋದಿ ಅವರು ಹಿಂದೆ ಕೊಟ್ಟ ಮಾತು, ಭರವಸೆಗಳನೇ ಈಡೇರಿಸಿಲ್ಲ ಎಂದ ಅವರು, ಹಿಂದೆ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿ ಕಳುಹಿಸಿದ ಇಲ್ಲಿನ ಜನತೆ ಈ ಬಾರಿ ಬಿ.ಎಲ್.ಶಂಕರ್ ಅವರನ್ನೂ ಚುನಾಯಿಸಲಿದ್ದಾರೆ. ಶಂಕರ್ ಗೆಲುವು, ಜನರ ಗೆಲುವು, ಅಭಿವೃದ್ಧಿಯ ಗೆಲುವಾಗಲಿದೆ ಎಂದು ಅವರು ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಮಾತನಾಡಿ, ಜಿಲ್ಲೆಯ ಜನರ ಬದುಕು ಕಟ್ಟುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದೇನೆ. ಅಧಿಕಾರ ನೀಡಿದರೆ ಇದೇ ಉದ್ದೇಶಕ್ಕಾಗಿ ರಾಜಕಾರಣ ಮಾಡುತ್ತೇನೆಯೇ ಹೊರತು ಜನರ ಭಾವನೆಗಳನ್ನು ಕೆರಳಿಸುವ ಸಂಸ್ಕೃತಿಗಿಳಿಯುವುದಿಲ್ಲ. ಪ್ರಚಾರದ ವೇಳೆ ವಿಷಯಾಧಾರಿತ ಅಂಶಗಳನ್ನು ಜನರ ಮುಂದಿಟ್ಟಿದ್ದೇನೆ. ಜನರ ಬೇಡಿಕೆ ಇದೇ ಆಗಿದ್ದರಿಂದ ಪ್ರತಿನಿಧಿಯಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯ ಪಂಚಪೀಠಗಳು ಬಿತ್ತಿದ ಸಾಮರಸ್ಯ, ಬಾಬಾಬುಡನ್‍ಗಿರಯ ಸೌಹಾರ್ದ, ಇಲ್ಲಿನ ಪ್ರಾಕೃತಿಕ ಸಂಪತ್ತು, ಕುವೆಂಪು ಅವರ ವಿಶ್ವಮಾನವ ತತ್ವದಿಂದಾಗಿ ಚಿಕ್ಕಮಗಳೂರು ವಿಶ್ವದ ಗಮನಸೆಳೆದಿತ್ತು. ಆದರೆ ಪ್ರಸಕ್ತ ಬೆಟ್ಟಿಂಗ್‍ನಂತಹ ದಂಧೆಯ ಕೇಂದ್ರವಾಗಿ ಜಿಲ್ಲೆ ಕುಖ್ಯಾತಿ ಪಡೆಯುತ್ತಿದೆ. ಈ ಕುಖ್ಯಾತಿಯಿಂದ ಜಿಲ್ಲೆಯನ್ನು ಹೊರತರಲು ಮತದಾರರಿಂದ ಮಾತ್ರ ಸಾಧ್ಯ. ಜಿಲ್ಲೆಯ ನೀರಾವರಿ ಸಮಸ್ಯೆಗಳಿಗೆ ಮುಕ್ತಿ, ಹೈಟೆಕ್ ಆಸ್ಪತ್ರೆ ನಿರ್ಮಾಣ, ಐಟಿ ಪಾರ್ಕ್, ಸುಂದರ ನಗರಕ್ಕಾಗಿ ಉತ್ತಮ ರಸ್ತೆ, ಹೈಟೆಕ್ ಬಸ್ ನಿಲ್ದಾಣ ಹಾಗೂ ಕ್ಷೇತ್ರದ ಮೂಲ ಸೌಕರ್ಯಗಳ ನಿವಾರಣೆಗೆ ಪಣತೊಟ್ಟಿದ್ದೇನೆ. ಈ ಕೆಲಸಗಳನ್ನು ನನ್ನಿಂದ ಮಾಡಿಸಲು ಮೇ 12ರಂದು ಮತದಾರರು ಪಣ ತೊಡಬೇಕೆಂದು ಕರೆ ನೀಡಿದರು.
ಮಾಜಿ ಸಚಿವ ಸಗೀರ್ ಅಹ್ಮದ್ ಮಾತನಾಡಿ, ಚುನಾವಣೆಗೆ ಎರಡು ದಿನ ಬಾಕಿ ಇರುವಂತೆಯೇ ಶಾಸಕ ಸಿಟಿ ರವಿ ಹಾಗೂ ಅವರ ಬೆಂಬಲಿಗರು ಅಡ್ಡದಾರಿ ಮೂಲಕ ಮತದಾರರನ್ನು ಖರೀದಿಗೆ ಮುಂದಾಗಿದ್ದಾರೆ. ದೇವರು ಧರ್ಮದ ಮೇಲೆ ಆಣೆ ಮಾಡಿಸಿಕೊಂಡು ಮತಹಾಕುವಂತೆ ಒತ್ತಡ ಹೇರುವ ಮಟ್ಟಕ್ಕೆ ರವಿ ಅಡ್ಡದಾರಿ ಹಿಡಿದಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ಬೇಕೋ, ಬಿಜೆಪಿ ಅವರ ಆಮಿಷ ಬೇಕೋ ಎಂಬುದನ್ನು ಮತದಾರರೇ ತೀರ್ಮಾನಿಸಿ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಬೇಕೆಂದರು.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ರೇಖಾ ಹುಲಿಯಪ್ಪಗೌಡ ಮಾತನಾಡಿ, ಹಿಂದುಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಾಗೂ ಮೋದಿ ಅವರು, ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಮರೆತಿದ್ದಾರೆ. ಸ್ಥಳೀಯ ಶಾಸಕ ಸಿಟಿ ರವಿ ದತ್ತಪೀಠ, ಹಿಂದೂ ಧರ್ಮವನ್ನು ಓಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದವರನ್ನೇ ಅವರು ತುಳಿದಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂದ ಅವರು, 15 ವರ್ಷಗಳಲ್ಲಿ ಶಾಶ್ವತ ನೀರಾವರಿ ಯೋಜನೆ ರೂಪಿಸದ ರವಿ ಅವರಿಂದಾಗಿ ಕ್ಷೇತ್ರದಲ್ಲಿ ಕೃಷಿಯೇ ನಾಶವಾಗಿದೆ. ಕರಗಡ ಯೋಜನೆಯನ್ನು ಜೀವಂತವಾಗಿಟ್ಟು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಮಾಜಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಕಳೆದ 15 ವರ್ಷಗಳಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಆದರೆ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಕ್ರಮ, ಬೆಟ್ಟಿಂಗ್ ದಂಧೆಗಳು ಜಿಲ್ಲೆಯಲ್ಲಿ ಅಭಿವೃದ್ಧಿ ಕಂಡಿವೆ ಎಂದ ಅವರು, ನಗರದ ಎಂಜಿ ರಸ್ತೆ, ಐಜಿ ರಸ್ತೆ, ಅಂಬೇಡ್ಕರ್ ರಸ್ತೆಗಳಿಗೆ ಬಂದ ಅಭಿವೃದ್ಧಿ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ. ಶಾಸಕರ ಸಂಬಂದಿಯೇ ಗುತ್ತಿಗೆ ನಿರ್ವಹಿಸಿ ಕಳಪೆ ಕಾಮಗಾರಿಗಳನ್ನು ಮಾಡಿದ್ದಾರೆ. ಬಸವನಹಳ್ಳಿ ಕೆರೆ, ಕೋಟೆಕೆರೆಗಳ ಅಭಿವೃದ್ಧಿ ಅನುದಾನವನ್ನು ಅಭಿವೃದ್ಧಿಗೆ ಬಳಸಿಲ್ಲ. ಸಿಟಿ ರವಿ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಕ್ಷೇತ್ರದಲ್ಲಿ ಜನಪರ ಯೋಜನೆಗಳ ಜಾರಿಗೆ ಸಜ್ಜನ, ಪ್ರಾಮಾಣಿಕ ರಾಜಕಾರಣಿ ಬಿ.ಎಲ್.ಶಂಕರ್ ಗೆಲ್ಲಬೇಕೆಂದರು.
ಸಿಪಿಐ ಮುಖಂಡ ರೇಣುಕಾರಾದ್ಯ, ಎಂ.ಎಲ್.ಮೂರ್ತಿ, ಮಾಜಿ ಶಾಸಕ ಕೆಬಿ ಮಲ್ಲಿಕಾರ್ಜುನ್, ಅತ್ತಿಕಟ್ಟೆ ಜಗನ್ನಾಥ್ ಮತ್ತಿತರರ ಉಪಸ್ಥಿತರಿದ್ದರು.
ಬಹಿರಂಗ ಸಭೆಗೂ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಸಾವಿರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಐಜಿ ರಸ್ತೆ, ಎಂಜಿ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು, ಈ ವೇಳೆ ಕಾರ್ಯಕರ್ತರ ಜಯಘೋಷ, ಹಸ್ತದ ಗುರುತಿನ ಬಾವುಟಗಳು ರಾರಾಜಿಸಿದವರು. ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್‍ಕುಮಾರ್, ಮುಖಂಡರಾದ ಎ.ಎನ್.ಮಹೇಶ್, ಸಂದೀಪ್, ಪವನ್, ಶಿವಕುಮಾರ್, ಶಾಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಭದ್ರಕೋಟೆ ಕಾಯುತ್ತಿರುವ ಕಾವಲುಗಾರರಾಗಿದ್ದಾರೆ. ಆದರೆ ಮೋದಿ ಮತ್ತವರ ಪಟಾಲಂ ಈ ಕೋಟೆಯನ್ನು ಒಡೆಯಲು ಬೆವರು ಸುರಿಸುತ್ತಿದ್ದಾರೆ. ಇದರಲ್ಲಿ ಅವರು ಸಫಲರಾಗುವುದೆ ಇಲ್ಲ. ಕರ್ನಾಟಕದ ಅಭಿವೃದ್ಧಿ ಯೋಜನೆಗಳು ಬಿಜೆಪಿ ಇರುವ ರಾಜ್ಯಗಳಲ್ಲಿಲ್ಲ. ಕರ್ನಾಟಕಕ್ಕೆ ಬೇಕಿರುವುದು ಒಡೆದಾಳುವ ನೀತಿಯಲ್ಲ, ಅಭಿವೃದ್ಧಿಯ ನೀತಿ ಎಂಬುದನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಿಎಂ ಅವರ ಬತ್ತಳಿಕೆಯಲ್ಲಿ ಇನ್ನಷ್ಟು ಜನಪರ ಯೋಜನೆಗಳಿವೆ. ಅವುಗಳ ಜಾರಿಗೆ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು.
-ಡಾ. ಬಿ.ಎಲ್.ಶಂಕರ್, ಕಾಂಗ್ರೆಸ್ ಅಭ್ಯರ್ಥಿ







