ರಾಹುಲ್ 2019ರಲ್ಲಿ ಬಿಜೆಪಿಗೆ ಸವಾಲು ಒಡ್ಡಬಲ್ಲರು : ಶಿವಸೇನೆ

ಮುಂಬೈ, ಮೇ 10: ಪ್ರಧಾನಿಯಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಬೇಕಿತ್ತು. ಆದರೆ ಅದರ ಬದಲು ರಾಹುಲ್ ಗಾಂಧಿಯವರನ್ನು ಗೇಲಿ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಶಿವಸೇನೆ ಹೇಳಿಕೆ ನೀಡಿದೆ.
ತನ್ನ ಭಾಷಣದಲ್ಲಿ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುವ ಸಂದರ್ಭ ರಾಹುಲ್ ಅತ್ಯಂತ ಘನತೆಯಿಂದ ವರ್ತಿಸಿದ್ದಾರೆ ಎಂದು ಶ್ಲಾಘಿಸಿರುವ ಶಿವಸೇನೆ, ರಾಹುಲ್ 2019ರಲ್ಲಿ ಬಿಜೆಪಿಗೆ ಸವಾಲು ಒಡ್ಡಬಹುದು ಎಂದು ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷರು ದೇಶದ ಪ್ರಧಾನಿಯಾಗುತ್ತಾರೋ ಅಥವಾ ಸೋಲುತ್ತಾರೋ ಎಂಬುದನ್ನು ಜನತೆ ನಿರ್ಧರಿಸುತ್ತಾರೆ. ಆದರೆ ರಾಹುಲ್ ಹೇಳಿಕೆಯ ಬಗ್ಗೆ ಗೇಲಿ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ. 2014ರ ರಾಹುಲ್ ಗಾಂಧಿಗೂ ಈಗಿನ ರಾಹುಲ್ ಗಾಂಧಿಗೂ ವ್ಯತ್ಯಾಸವಿದೆ. ಸತತ ಟೀಕೆಗಳನ್ನು ಎದುರಿಸಿ ಈಗ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಿದೆ. ಅವರು 2019ರಲ್ಲಿ ಬಿಜೆಪಿಗೆ ಸವಾಲೆಸೆಯಬಲ್ಲರು ಎಂಬುದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ. ರಾಹುಲ್ ಬಗ್ಗೆ ಬಿಜೆಪಿ ಅವಹೇಳನಕಾರಿ ಭಾಷೆ ಬಳಸಿದರೂ ಅವರು ಆ ಮಟ್ಟಕ್ಕೆ ಇಳಿಯದೆ, ಮೋದಿಯನ್ನು ಟೀಕಿಸುವಾಗ ಪ್ರಧಾನಿ ಎಂದು ಗೌರವಿಸಿದ್ದಾರೆ ಎಂದು ಶಿವಸೇನೆ ತಿಳಿಸಿದೆ.
ಪ್ರಧಾನಿ ಮೋದಿಗೆ ಈಗ ‘ಒಕ್ಕೂಟದ ಧರ್ಮ’ ನೆನಪಾಗುತ್ತಿದೆ. ಇದನ್ನು ಕೇಳಿ ತುಂಬಾ ಖುಷಿಯಾಗಿದೆ . ಎನ್‌ಡಿಎ ಮಿತ್ರಪಕ್ಷಗಳ ಸಂಘಟಿತ ಪ್ರಯತ್ನದಿಂದ ಬಿಜೆಪಿಗೆ ದೊರೆತಿರುವ ಅಧಿಕಾರ ಎಂಬ ಖಡ್ಗದ ಮೂಲಕ ಒಕ್ಕೂಟದ ಪಕ್ಷಗಳ ಬೆನ್ನಿಗೆ ಇರಿಯಲಾಗಿದೆ.ಕಾಂಗ್ರೆಸ್ ಹಾಗೂ ಯುಪಿಎ ಮಿತ್ರಪಕ್ಷಗಳಲ್ಲಿ ಹಿರಿಯ ಮುಖಂಡರು ಇರುವಾಗ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಹೇಗಾಗುತ್ತಾರೆ ಎಂದು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿಯ ಹಿರಿಯರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಈ ಪ್ರಶ್ನೆಗೆ ಉತ್ತರಿಸಬೇಕಿದೆ ಎಂದು ಶಿವಸೇನೆ ಇದಿರೇಟು ನೀಡಿದೆ. ಇದೇ ರೀತಿ, ಎನ್‌ಡಿಎ ಮಿತ್ರಪಕ್ಷಗಳ ಜೊತೆ ಸಮಾಲೋಚಿಸದೆ ಮೋದಿ ಹಾಗೂ ಶಾ ರಾಷ್ಟ್ರಪತಿಯವರ ನೇಮಕದ ಬಗ್ಗೆ ನಿರ್ಧರಿಸಿಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದೆ.







