ಮಾಜಿ ಸಚಿವ ಜನಾರ್ದನರೆಡ್ಡಿ ಪರ ಶ್ರೀರಾಮುಲು ಡೀಲ್ ?
‘ಸುಪ್ರೀಂ’ ಮುಖ್ಯ ನ್ಯಾಯಮೂರ್ತಿಗೆ 160 ಕೋಟಿ ರೂ.ಲಂಚ ಆರೋಪ

ಬೆಂಗಳೂರು, ಮೇ 10: ಆಂಧ್ರಪ್ರದೇಶ ಸರಕಾರವು ಓಬಳಾಪುರಂ ಗಣಿ ಕಂಪೆನಿಯ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುವಂತೆ 2010ರಲ್ಲಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಎತ್ತಿ ಹಿಡಿಯಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಜನಾರ್ದನ ರೆಡ್ಡಿ ಪರವಾಗಿ ಅಂದಿನ ಸಚಿವ ಶ್ರೀರಾಮುಲು 160 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆಗ್ರಹಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಓಬಳಾಪುರಂ ಪ್ರಕರಣವನ್ನು ಕೈ ಬಿಟ್ಟು, ತಮ್ಮ ಪರವಾಗಿ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಅಳಿಯ ಶ್ರೀಜಿನ್ ಜೊತೆಯಲ್ಲಿ ಶ್ರೀರಾಮುಲು ಹಾಗೂ ಅವರ ಆಪ್ತರು ಚರ್ಚೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ದೂರಿದರು.
ಓಬಳಾಪುರಂ ಗಣಿ ಕಂಪೆನಿಯನ್ನು ನಿಲ್ಲಿಸುವಂತೆ ಆಂಧ್ರಪ್ರದೇಶ ಸರಕಾರ ನೀಡಿದ್ದ ಆದೇಶಕ್ಕೆ ಅಲ್ಲಿನ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರಲಾಗಿತ್ತು. ಆನಂತರ, ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನಿವೃತ್ತಿಗೂ ಒಂದು ದಿನ ಮುನ್ನ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಆದೇಶ ಹೊರಡಿಸಿದ್ದರು ಎಂದು ಅವರು ಹೇಳಿದರು.
ಸುಮಾರು ಮೂರು ತಿಂಗಳು ಕಾಲ ಬೆಂಗಳೂರಿನಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾಟರ್ಸ್‌ನಲ್ಲಿದ್ದ ಶ್ರೀರಾಮುಲು ಅವರ ಮನೆ ಹಾಗೂ ಕೇರಳದ ಕೊಚ್ಚಿಯಲ್ಲಿ ಮಧ್ಯವರ್ತಿಗಳ ಮೂಲಕ ಈ ವ್ಯವಹಾರ ನಡೆದಿದೆ. ಶ್ರೀರಾಮುಲು, ನ್ಯಾ.ಬಾಲಕೃಷ್ಣನ್ ಅವರ ಅಳಿಯ, ಒಬ್ಬ ಸ್ವಾಮೀಜಿ ಹಾಗೂ ಮಧ್ಯವರ್ತಿ ಕೂಬಾಲನ್ ಮಾತುಕತೆ ನಡೆಸುತ್ತಿರುವ ವೀಡಿಯೋ ಈಗ ಬಹಿರಂಗವಾಗಿದೆ. ಇದರಲ್ಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಲು 160 ಕೋಟಿ ರೂ.ಗಳಿಗೆ ವ್ಯವಹಾರ ಮಾಡಿಕೊಂಡಿದ್ದರು ಎಂದು ದಿನೇಶ್‌ಗುಂಡೂರಾವ್ ದೂರಿದರು.
ಬಾಲಕೃಷ್ಣನ್ ಅವರ ಅಳಿಯಂದಿರಾದ ಬಿನ್ನಿ ಅವರಿಗೆ 60 ಕೋಟಿ ರೂ., ಶ್ರೀಜಿನ್‌ಗೆ 40 ಕೋಟಿ ರೂ.ನೀಡಿರುವುದಾಗಿ ಮಧ್ಯವರ್ತಿ ಚಂದ್ರಶೇಖರರೆಡ್ಡಿ ಹೇಳುತ್ತಾರೆ. ಆದರೆ, ನಮಗೆ ಪೂರ್ತಿ ಹಣ ಸಿಕ್ಕಿಲ್ಲ, ಇನ್ನೂ 60 ಕೋಟಿ ರೂ.ಬಾಕಿಯಿದೆ. ನಮ್ಮ ಮಾವ ನಿವೃತ್ತಿಯಾದರೂ ಈಗಲೂ ಈ ಪ್ರಕರಣದಲ್ಲಿ ನಿಮ್ಮನ್ನು ಸಿಲುಕಿಸಬಹುದು ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ ಎಂದು ಅವರು ಆರೋಪಿಸಿದರು.
ನಮ್ಮ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿ ನಾಯಕರು ತಮ್ಮ ಪಕ್ಕದಲ್ಲೆ ಭ್ರಷ್ಟರನ್ನು ಕೂರಿಸಿಕೊಂಡಿದ್ದಾರೆ. ರೆಡ್ಡಿ ಸಹೋದರರಿಗೆ ಪ್ರಚಾರದ ಉಸ್ತುವಾರಿ ನೀಡಿದ್ದಾರೆ. ಎಂಟು ಮಂದಿ ರೆಡ್ಡಿ ಸಹೋದರರು, ಸಹಚರರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ರಾಜ್ಯವನ್ನು ಲೂಟಿ ಹೊಡೆದಿದ್ದ ಭ್ರಷ್ಟಾಚಾರದ ಪೂರ್ಣ ತಂಡವನ್ನು ಸ್ಥಾಪಿಸಲು ಹೊರಟಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಧೈರ್ಯ ಮೆಚ್ಚಲೇಬೇಕು ಎಂದು ಅವರು ತಿಳಿಸಿದರು.
ಬಿಜೆಪಿಯವರದ್ದು ಭ್ರಷ್ಟಾಚಾರದ ಮುಖ. ಮೋದಿ ಹಾಗೂ ಅಮಿತ್ ಶಾ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಗಣಿಗಾರಿಕೆ ಪ್ರಕರಣಗಳನ್ನು ಸಿಬಿಐಯಿಂದ ಖುಲಾಸೆ ಮಾಡಿಸುತ್ತಿದ್ದಾರೆ. ನ್ಯಾಯಾಲಯ, ಮಾಧ್ಯಮ, ನಾಗರಿಕ ಸಮಾಜ ಎಲ್ಲದರ ಮೇಲೂ ಅಗೋಚರ ಒತ್ತಡವನ್ನು ಹೇರಲಾಗುತ್ತಿದೆ ಎಂದು ದಿನೇಶ್‌ಗುಂಡೂರಾವ್ ದೂರಿದರು.
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳೇ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕುರಿತು ಬೀದಿಗೆ ಬಂದು ಅಸಮಾಧಾನ ತೋಡಿಕೊಳ್ಳುವಂತಾಗಿದೆ. ದೇಶದಲ್ಲಿರುವ ಎಲ್ಲ ವಿಚಾರಗಳನ್ನು ನಿಯಂತ್ರಿಸುವ ಸರ್ವಾಧಿಕಾರಿಯಂತೆ ಮೋದಿ, ಶಾ ನಡೆದುಕೊಳ್ಳುತ್ತಿದ್ದಾರೆ. ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಪ್ರಕರಣ ದಾಖಲಿಸುವುದು, ಐಟಿ ದಾಳಿ ಮಾಡಿಸುವುದು ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ಒಂದು ರೀತಿ ಮಾಫಿಯಾ ರಾಜಕಾರಣ ನಡೆಯುತ್ತಿದ್ದು, ಮೋದಿ ಒಬ್ಬ ಡಾನ್ ರೀತಿಯಲ್ಲಿ ದೇಶ ನಡೆಸುತ್ತಿದ್ದಾರೆ. ತಮ್ಮ ಪರ ತೀರ್ಪು ಪಡೆಯಲು ನ್ಯಾಯಮೂರ್ತಿಗಳಿಗೆ ಲಂಚ ನೀಡುವವರ ವಿರುದ್ಧ ಬಿಜೆಪಿ, ಪ್ರಧಾನಿ ಏನು ಕ್ರಮ ಕೈಗೊಳ್ಳುತ್ತದೆ. ಚುನಾವಣಾ ಕಣದಿಂದ ಇವರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತದೆಯೇ?, ಕೇವಲ ಭಾಷಣ ಮಾಡುವ ಪ್ರಧಾನಿ ನಮಗೆ ಅಗತ್ಯವಿಲ್ಲ. ಈ ವಿಚಾರದಲ್ಲಿ ತಮ್ಮ ನಿಲುವನ್ನು ಅವರು ಸ್ಪಷ್ಟಪಡಿಸಲಿ ಎಂದು ದಿನೇಶ್‌ಗುಂಡೂರಾವ್ ಆಗ್ರಹಿಸಿದರು.
ಶ್ರೀರಾಮುಲುರನ್ನು ತಮ್ಮ ಪಕ್ಷದ ತಾರಾ ಪ್ರಚಾರಕರನ್ನಾಗಿ ನೇಮಿಸಿಕೊಂಡಿರುವ ಬಿಜೆಪಿ, ಅವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿದೆ. ನೈತಿಕತೆಯ ಅಧಃಪತನಕ್ಕೆ ಬಿಜೆಪಿಯವರು ಹೋಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಶದ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







