ಜೆಡಿಎಸ್ ಜತೆ ಸೇರಿ ಅಧಿಕಾರ ನಡೆಸುವ ಪ್ರಮೇಯವೇ ಬರಲ್ಲ: ಅಮಿತ್ ಶಾ

ಬೆಂಗಳೂರು, ಮೇ 10: ಬಿಜೆಪಿ ಪಕ್ಷ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು, ಜೆಡಿಎಸ್ ಜೊತೆಗೆ ಸೇರಿ ಅಧಿಕಾರವನ್ನು ನಡೆಸುವ ಪ್ರಮೇಯವೇ ಬರುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ನರೇಂದ್ರ ಮೋದಿ ಸರಕಾರದ ಜತೆ ಯಡಿಯೂರಪ್ಪ ಸರಕಾರ ಕರ್ನಾಟಕದ ವಿಕಾಸಕ್ಕಾಗಿ ಕೆಲಸ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ಗುರುವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ವಾತಾವರಣ ಇಲ್ಲಿ ಇದೆ. ಬಾದಾಮಿ, ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮುಖವಾಡ ಕಳಚಿದೆ. ವೋಟರ್ ಐಡಿ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬಂಧನವಾಗಿದೆ. ಈ ಪ್ರಕರಣವನ್ನು ಬಿಜೆಪಿ ಮೇಲೆ ಹಾಕಲು ಮುಂದಾಗಿದ್ದರು. ಎಸ್‌ಡಿಪಿಐ, ಕಾಂಗ್ರೆಸ್ ನಡುವೆ ಒಪ್ಪಂದ ಆಗಿರೋದು ಜಗಜ್ಜಾಹೀರಾಗಿದೆ. ಜನತೆಯ ಮಧ್ಯೆ ಸಿದ್ದರಾಮಯ್ಯ ಮುಖವಾಡ ಬಯಲಾಗಿದೆ ಎಂದು ಹೇಳಿದರು.
ಟಿಪ್ಪು ಜಯಂತಿ ಮಾಡುತ್ತಾರೆ. ಆದರೆ, ಕನ್ನಡದ ಶ್ರೇಷ್ಠ ವ್ಯಕ್ತಿಗಳ ಜಯಂತಿ ಮಾಡಲು ಕಾಂಗ್ರೆಸ್‌ಗೆ ನೆನಪಿಲ್ಲ. ಸಿದ್ದರಾಮಯ್ಯ ಸರಕಾರದ ವಿರುದ್ಧ ಜನಾಕ್ರೋಶ ಇದೆ. ಸಿದ್ದರಾಮಯ್ಯ ಸ್ವತಂತ್ರ ಭಾರತದ ಅತ್ಯಂತ ವಿಫಲ ಸಿಎಂ. ರಾಜ್ಯದಲ್ಲಿ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕನ ಮಗ ಗೂಂಡಾಗಿರಿ ಮಾಡಿದರೂ ಎಫ್‌ಐಆರ್ ಆಗಿಲ್ಲ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಚಾಮುಂಡೇಶ್ವರಿ, ಬಾದಾಮಿಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ತಿಳಿಸಿದರು.
ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕುರಿತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಸುರೇಶ್ ಕುಮಾರ್ ಪುತ್ರಿಯಿಂದ ಹಣ ಹಂಚಿಕೆ ಆರೋಪ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಾ, ಈ ಬಗ್ಗೆ ನಮ್ಮ ವಕ್ತಾರರು ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ ಸೇರಿ ಅನೇಕ ಸಮಸ್ಯೆಗಳಿಂದ ರಾಜ್ಯ ಬಳಲುತ್ತಿದೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಸಿಹಿ ಸುದ್ದಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪಿಯೂಷ್ ಗೋಯಲ್, ಸಂಸದ ಪಿ.ಸಿ.ಮೋಹನ್, ಬಿಜೆಪಿ ಮುಖಂಡ ಮುರಳಿಧರ್‌ರಾವ್ ಉಪಸ್ಥಿತರಿದ್ದರು.
ನಂಬಲಾಗುವುದಿಲ್ಲ
ಜನಾರ್ದನ ರೆಡ್ಡಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಶ್ರೀರಾಮುಲು ಡೀಲ್ ಕುದುರಿಸಿರುವ ವೀಡಿಯೋ ರಿಲೀಸ್ ವಿಚಾರ, ಚುನಾವಣೆ ವೇಳೆ ಈ ರೀತಿಯ ವೀಡಿಯೋ ಬಿಡುಗಡೆ ಸಾಮಾನ್ಯ. ಹೀಗೆ ಬಹಳಷ್ಟು ಬರುತ್ತವೆ. ಅವೆಲ್ಲವನ್ನೂ ನಂಬಲು ಆಗಲ್ಲ.
-ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ







