ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಯಶವಂತ್ ಸಿನ್ಹಾ

ಪಣಜಿ, ಮೇ 10: ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಆರಂಭಿಸಿರುವ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಕೇಂದ್ರ ಸರಕಾರದ ಆಡಳಿತದಲ್ಲಿ ‘ತೆರಿಗೆ ಭಯೋತ್ಪಾದನೆ’ ನಡೆಯುತ್ತಿದೆ ಹಾಗೂ ದೇಶ ‘ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ’ದೆ ಎಂದು ಹೇಳಿದ್ದಾರೆ. 1975ರಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಲು ರಾಜಕೀಯ ಕಾರಣವಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಂದು ಇಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅವರು ಹೇಳಿದರು. ಪ್ರತಿಪಕ್ಷದಲ್ಲಿದ್ದಾಗ ನಾವು ಯುಪಿಎ ಸರಕಾರ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದೆವು. ನಮಗೆ ಮತ ನೀಡಿ ಅಧಿಕಾರಕ್ಕೆ ತಂದರೆ ತೆರಿಗೆ ಭಯೋತ್ಪಾದನೆಯನ್ನು ರದ್ದುಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದೆವು ಎಂದು ಯಶವಂತ್ ಸಿನ್ಹಾ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಇಂಡಿಯನ್ ಇಕಾನಮಿ ಆ್ಯಂಡ್ ಚಾಲೆಂಜ್ ಬಿಫೋರ್ ಡೆಮಾಕ್ರೆಸಿ’ ಕುರಿತು ಮಾತನಾಡುತ್ತಾ ಹೇಳಿದರು.
ಬಿಜೆಪಿಯೊಂದಿಗೆ ಎಲ್ಲ ಸಂಬಂಧವನ್ನು ತಾನು ಕಡಿದುಕೊಂಡಿದ್ದೇನೆ ಹಾಗೂ ಪ್ರಜಾಪ್ರಭುತ್ವ ಉಳಿಸಲು ದೇಶಾದ್ಯಂತ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಯಶ್ವಂತ್ ಸಿನ್ಹಾ ಕಳೆದ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ನಗದು ನಿಷೇಧದ ಬಳಿಕ ಈ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾದ ಹಣದ ಬಗ್ಗೆ ವಿವರಣೆ ಕೋರಿ 20 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ಯಶವಂತ್ ಸಿನ್ಹಾ ಹೇಳಿದರು.
2017 ಜುಲೈಯಲ್ಲಿ ಜಿಎಸ್‌ಟಿ ಪರಿಚಯಿಸಿದ ಬಳಿಕ 357 ಬಾರಿ ತಿದ್ದುಪಡಿ ಮಾಡಲಾಗಿದೆ. ಇದು ದೇಶದ ತೆರಿಗೆ ಪದ್ಧತಿಯನ್ನು ಜೋಕ್ ಮಾಡಿದಂತಾಗಿದೆ. ಇದರಿಂದ ಎಲ್ಲರಿಗೂ ತೊಂದರೆ ಉಂಟಾಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ವ್ಯಾಪಾರಸ್ಥರಿಗೆ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸುವಂತೆ ಹೇಳಲಾಗುತ್ತಿದೆ. ಅವರು ಹೇಗೆ ತೆರಿಗೆ ಕಟ್ಟಲು ಸಾಧ್ಯ ಎಂದು ಯಶವಂತ್ ಸಿನ್ಹಾ ಪ್ರಶ್ನಿಸಿದರು.







