ಮೋದಿ ಹೆಸರಿನಲ್ಲಿ ಗೆದ್ದವರಿಂದ ಮೋಸ: ಶ್ರೀಕರ ಪ್ರಭು

ಮಂಗಳೂರು, ಮೇ 10: ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆದ್ದವರಿಂದ ಮೋಸವಾಗಿದೆ. ಇಂತಹವರಿಂದ ಪಕ್ಷದ್ರೋಹದ ಕೆಲಸವಾಗುತ್ತಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಆಟೋ ರಿಕ್ಷಾ ಚಿಹ್ನೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿರುವ ಆರ್.ಶ್ರೀಕರ ಪ್ರಭು ಆರೋಪಿಸಿದ್ದಾರೆ.
ಶ್ರೀಕರ ಪ್ರಭು ಅಭಿಮಾನಿ ಬಳಗದಿಂದ ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದ ನನ್ನನ್ನು ಪಕ್ಷದಿಂದ ಉಚ್ಛಾಟಿಸಿರುವುದಕ್ಕೆ ಈವರೆಗೆ ಕಾರಣ ನೀಡಿಲ್ಲ. ಈ ಮೂಲಕ ಪಕ್ಷದ ಕಾರ್ಯಕರ್ತನಿಗೆ ಅವಮಾನ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಸಿದ್ಧಾಂತ ಎಂಬುದಿಲ್ಲ. ನರೇಂದ್ರ ಮೋದಿ ಅವರ ಅಭಿಮಾನಿಯಾಗಿರುವ ನಾನು ಆ ಸಿದ್ಧಾಂತದಲ್ಲೇ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಅಭಿವೃದ್ಧಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಚುನಾವಣಾ ಪ್ರಚಾರ ಸಂದರ್ಭ ಮನೆ ಮನೆಗೆ ಭೇಟಿ ನೀಡಿದಾಗ ಇದು ಗಮನಕ್ಕೆ ಬಂದಿದೆ. ಕೆಲವೆಡೆ ರಸ್ತೆಗಳು ಸರಿಯಾಗಿಲ್ಲ. ದಾರಿದೀಪಗಳಿಲ್ಲ. ಚರಂಡಿಗಳು ಸರಿಯಾಗಿಲ್ಲ. ಫುಟ್‌ಪಾತ್‌ಗಳಿಲ್ಲ. ಆದ್ದರಿಂದ ಈ ಬಾರಿ ಕ್ಷೇತ್ರದ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ನನಗೆ ಅವಕಾಶ ನೀಡುವ ಮೂಲಕ ಪರಿವರ್ತನೆ ತರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶ್ರೀಕರ ಪ್ರಭು ಹೇಳಿದರು.
ಕ್ಷೇತ್ರದ ಕೆಲವು ಮನೆಗಳಲ್ಲಿ ಆಟೊ ರಿಕ್ಷಾ ಹೋಗುವಷ್ಟು ರಸ್ತೆಗಳಿಲ್ಲ. ನಾನು ಗೆದ್ದರೆ ಮನೆಗೆ ರಿಕ್ಷಾ ಹೋಗುವಷ್ಟು ರಸ್ತೆಗಳನ್ನು ವಿಸ್ತರಿಸುವುದಾಗಿ ಭರವಸೆ ನೀಡಿದರು. ಆರ್.ಕೆ.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮ್ ಸುದರ್ಶನ್ ಭಟ್ ಉದ್ಘಾಟನಾ ಭಾಷಣ ಮಾಡಿದರು. ಕೆ.ಪಿ.ಶೆಟ್ಟಿ ಬೇಡೆಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರಕಲಾ ಪ್ರಭು, ಶ್ರೀಲತಾ ಗೋಪಾಲಕೃಷ್ಣ, ಪ್ರೇಮ್‌ಚಂದ್ರ ಎಸ್., ರಘುನಾಥ್ ಮಾಬೆನ್, ವಸಂತ ಪ್ರಭು, ಸುರೇಶ್, ಅಶ್ವಿತ್ ಕುಮಾರ್, ಜೈ ರಾಮ್ ಕಾಮತ್ ಉಪಸ್ಥಿತರಿದ್ದರು. ರಾಮ್ ಮೋಹನ್ ಸ್ವಾಗತಿಸಿದರು. ಸುರೇಶ್ ಶೆಟ್ಟಿ ವಂದಿಸಿದರು. ಅವಿನಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







