ಬಾಲ ಗಂಗಾಧರ್ ತಿಲಕ್ ರನ್ನು ‘ಭಯೋತ್ಪಾದನೆಯ ಪಿತಾಮಹ’ ಎಂದ 8ನೆ ತರಗತಿ ಪಠ್ಯಪುಸ್ತಕ!

ಹೊಸದಿಲ್ಲಿ, ಮೇ 10: ರಾಜಸ್ಥಾನದ 8ನೆ ತರಗತಿಯ ಪಠ್ಯಪುಸ್ತಕವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ್ ತಿಲಕ್ ರನ್ನು ‘ಭಯೋತ್ಪಾದನೆಯ ಪಿತಾಮಹ’ ಎಂದು ವಿವರಿಸಿರುವುದು ಹೊಸ ವಿವಾದವನ್ನು ಸೃಷ್ಟಿಸಿದೆ.
ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸೇರಿದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ಪಠ್ಯಪುಸ್ತಕದಲ್ಲಿ ಈ ರೀತಿ ಬರೆಯಲಾಗಿದೆ. 267 ಪುಟದಲ್ಲಿರುವ “18, 19ನೆ ಶತಮಾನದಲ್ಲಿ ರಾಷ್ಟ್ರೀಯ ಚಳವಳಿಗಳ ಘಟನೆಗಳು” ಎನ್ನುವ ಪಠ್ಯದಲ್ಲಿ, “ರಾಷ್ಟ್ರೀಯ ಚಳವಳಿಯ ದಾರಿಯನ್ನು ತಿಲಕ್ ತೋರಿಸಿಕೊಟ್ಟರು, ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಕರೆಯಲಾಗುತ್ತದೆ” ಎಂದು ವಿವರಿಸಲಾಗಿದೆ.
“ಬ್ರಿಟಿಷ್ ಅಧಿಕಾರಿಗಳೊಂದಿಗೆ ಬೇಡಿ ಏನನ್ನೂ ಸಾಧಿಸಲಾಗುವುದಿಲ್ಲ ಎಂದವರು ನಂಬಿದ್ದರು. ಶಿವಾಜಿ ಹಾಗು ಗಣಪತಿ ಉತ್ಸವಗಳ ಮೂಲಕ ಅವರು ಜಾಗೃತಿ ಮೂಡಿಸಿದರು. ಇದೇ ಕಾರಣದಿಂದ ಅವರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು” ಎನ್ನುವುದು ಪುಸ್ತಕದಲ್ಲಿದೆ.
ಈ ವಿಚಾರ ಬೆಳಕಿಗೆ ಬರುತ್ತಲೇ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ. ತನಗೆ ಈ ಬಗ್ಗೆ ಏನೂ ತಿಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ ತಾನು ಶಾಲೆಗೆ ಸೇರಿದ್ದೇನೆ ಎಂದು ವಿವಾದಾತ್ಮಕ ಪಠ್ಯಪುಸ್ತಕವಿರುವ ಶಾಲೆಯ ನೂತನ ಪ್ರಾಂಶುಪಾಲರು ತಿಳಿಸಿದ್ದಾರೆ.







