ಭೀಮ್ ಆರ್ಮಿ ನಾಯಕನ ಸಹೋದರನ ಹತ್ಯೆ ಪ್ರಕರಣ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಮೀರತ್, ಮೇ 10: ಗುಂಡು ತಗುಲಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾದ ಭೀಮ್ ಸೇನೆಯ ಶಹರಣಪುರ ಜಿಲ್ಲೆ ಅಧ್ಯಕ್ಷ ಕಮಾಲ್ ವಾಲಿಯಾ ಅವರ ಸಹೋದರ ಸಚಿನ್ ವಾಲಿಯಾ ಅವರ ಸಾವಿಗೆ ದಲಿತ ಸಂಘಟನೆ ಭೀಮ್ ಸೇನೆಯ ಬೆಂಬಲಿಗರು ರಜಪೂತರನ್ನು ಹೊಣೆಯಾಗಿಸಿದ್ದಾರೆ.
ಹತ ಸಚಿನ್ ವಾಲಿಯಾ ಅವರ ತಾಯಿ ಕಾಂತಿ ವಾಲಿಯಾ ನೀಡಿದ ದೂರಿನಂತೆ ರಜಪೂತ್ ಮಹಾಸಭಾದ ಅಧ್ಯಕ್ಷ ಹಾಗೂ ಫೂಲನ್ ದೇವಿ ಹತ್ಯೆ ಪ್ರಕರಣದ ಆರೋಪಿ ಆಗಿರುವ ಶೇರ್ ಸಿಂಗ್ ಹಾಗೂ ಕನ್ಹಾ ರಾಣಾ, ಉಪದೇಶ್ ರಾಣಾ, ನರೇಂದ್ರ ರಾಣಾ ವಿರುದ್ಧ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಹತ್ಯೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
‘‘ಸಾಧ್ಯತೆ ಇರುವ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ’’ ಶಹರಣಪುರದ ಎಸ್‌ಎಸ್‌ಪಿ ಬಬ್ಲೂ ಕುಮಾರ್ ಹೇಳಿದ್ದಾರೆ. ಕಳೆದ ವರ್ಷ ಮಹಾರಾಣಾ ಪ್ರತಾಪ್ ಜಯಂತಿ ಮೆರವಣಿಗೆ ಸಂದರ್ಭ ಜೋರಾಗಿ ಹಾಡು ಹಾಕಿದ ಹಿನ್ನೆಲೆಯಲ್ಲಿ ವಿವಾದ ಉಂಟಾದ ಬಳಿಕ ಎರಡು ಜಾತಿಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸಚಿನ್ ವಾಲಿಯಾ ಅವರ ಸಾವು ಮತ್ತೆ ಘರ್ಷಣೆ ಉಂಟಾಗುವ ಆತಂಕವನ್ನು ಹುಟ್ಟು ಹಾಕಿದೆ.





