ರೈಲುಗಳಲ್ಲಿ ಇನ್ನು ‘ಸ್ಮಾರ್ಟ್ ಕೋಚ್, ಬ್ಲಾಕ್ ಬಾಕ್ಸ್’ ವ್ಯವಸ್ಥೆ
ಇವುಗಳ ವಿಶೇಷತೆಗಳ ಮಾಹಿತಿ ಇಲ್ಲಿದೆ

ಹೊಸದಿಲ್ಲಿ, ಮೇ 10: ಇದೇ ಪ್ರಪ್ರಥಮ ಬಾರಿಗೆ ಭಾರತೀಯ ರೈಲುಗಳು ಇನ್ನು ಮುಂದೆ ಬ್ಲಾಕ್ ಬಾಕ್ಸ್ , ಬೋಗಿಗಳ ಮಾಹಿತಿ ವ್ಯವಸ್ಥೆಯನ್ನು ಒಳಗೊಂಡ ‘ಸ್ಮಾರ್ಟ್ ಕೋಚ್’ಗಳಾಗಿ ಪರಿವರ್ತನೆಯಾಗಲಿವೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಹು ಆಯಾಮದ ಮಾಹಿತಿಯನ್ನು ಒದಗಿಸುವ ಪ್ರಬಲ ಅಂತರ್‌ಸಂಪರ್ಕ ಸಾಧನವಾದ ಕಪ್ಪು ಪೆಟ್ಟಿಗೆ(ಬ್ಲಾಕ್ ಬಾಕ್ಸ್)ಗಳು ಬೋಗಿಗಳ ಹಾಗೂ ಪ್ರಯಾಣಿಕರ ಕುರಿತ ವಾಸ್ತವಿಕ ಮಾಹಿತಿಯನ್ನು ಒದಗಿಸುತ್ತವೆ. ಪ್ರಪ್ರಥಮ ಸ್ಮಾರ್ಟ್ ಕೋಚ್ ಅನ್ನು ಪ್ರಾಯೋಗಿಕವಾಗಿ ರಾಷ್ಟ್ರೀಯ ತಾಂತ್ರಿಕ ದಿನವಾದ ಮೇ 11ರಂದು ರಾಯ್‌ಬರೇಲಿ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ತಪ್ಪುವುದು, ರೈಲುಗಳ ಸಂಚಾರದಲ್ಲಿ ವಿಳಂಬ, ರೈಲುಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಕುಸಿತ ಮುಂತಾದ ಸಮಸ್ಯೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಈ ಸಾಧನ ನೆರವಾಗುತ್ತದೆ. ಅಲ್ಲದೆ ಪ್ರಯಾಣಿಕರ ರೈಲಿಗೆ ಸಂಬಂಧಿಸಿದ ನ್ಯೂನತೆಗಳು ಹಾಗೂ ಚಲಿಸುತ್ತಿರುವ ರೈಲಿನ ಬಗ್ಗೆ ಮಾಹಿತಿ ಒದಗಿಸುವ ಸೆನ್ಸಾರ್ ಆಧರಿತ ‘ಆನ್ ಬೋರ್ಡ್ ಕಂಡಿಷನ್ ಮಾನಿಟರಿಂಗ್’ (ಒಬಿಸಿಎಂಎಸ್) ವ್ಯವಸ್ಥೆಯನ್ನು ರೈಲ್ವೇ ಮಂಡಳಿ ಜಾರಿಗೊಳಿಸಲಿದೆ. ಒಬಿಸಿಎಂಎಸ್‌ನಲ್ಲಿ ಸಿಸಿಟಿವಿ, ರೈಲುಗಳ ಸ್ಥಿತಿ ಗತಿಯನ್ನು ಅತ್ಯಾಧುನಿಕವಾಗಿ ಸೂಚಿಸುವ ವ್ಯವಸ್ಥೆಯಿದ್ದು ಇದು ರೈಲುಗಳ ಕಾರ್ಯಾಚರಣೆಯನ್ನು ಹೆಚ್ಚು ಸುರಕ್ಷಿತ , ಭದ್ರ ಹಾಗೂ ಸುವ್ಯಸ್ಥಿತವನ್ನಾಗಿಸುತ್ತದೆ . ಈ ವ್ಯವಸ್ಥೆಯು ರೈಲುಗಳ ಕಂಪನ ಮತ್ತು ತಾಪಮಾನವನ್ನು ನಿರಂತರ ದಾಖಲಿಸುತ್ತಾ ಬರುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸವಾದರೆ ತಕ್ಷಣ ಎಚ್ಚರಿಕೆ ನೀಡುತ್ತದೆ. ರೈಲುಗಳ ಕಂಪನ (ರೈಲು ಚಲಿಸುವಾಗ ಆಗುವ ಅಲುಗಾಟ)ದಲ್ಲಿ ತುಸು ವ್ಯತ್ಯಾಸವಾದರೂ ರೈಲುಗಳ ಚಕ್ರದ ಬೇರಿಂಗ್‌ನಲ್ಲಿ ಏನೋ ಸಮಸ್ಯೆಯಿದೆ ಎಂಬ ಸಂದೇಶ ನೀಡುತ್ತದೆ.
ಇದರಿಂದ ಸಮಸ್ಯೆಯನ್ನು ತಕ್ಷಣ ಸರಿಪಡಿಸಲು ಸಾಧ್ಯವಾಗಿ ಹೆಚ್ಚಿನ ಹಾನಿಯಾಗದಂತೆ ತಡೆಯಬಹುದಾಗಿದೆ. ತಂತಿರಹಿತ ಸೆನ್ಸಾರ್ ಸಾಧನಗಳನ್ನು ರೈಲುಗಳ ಚಕ್ರಗಳಿಗೆ ಅಳವಡಿಸಿದರೆ ಅದು ಚಕ್ರಗಳ ಸ್ಥಿತಿಗತಿಯ ಬಗ್ಗೆ ನಿರಂತರ ಮಾಹಿತಿ ರವಾನಿಸುತ್ತದೆ. ಇದರಿಂದ ರೈಲು ಹಳಿಗಳ ಸ್ಥಿತಿ ಗತಿಯನ್ನು ಕಾಲಕಾಲಕ್ಕೆ ನಿರ್ಧರಿಸಬಹುದು. ಈ ಸುಧಾರಿತ ಸುರಕ್ಷಾ ವ್ಯವಸ್ಥೆಯಿಂದ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ ಹಾಗೂ ರೈಲ್ವೇ ಇಲಾಖೆಯ ಆಸ್ತಿಪಾಸ್ತಿಗಳಿಗೆ ಹಾನಿಯಾಗುವುದನ್ನು ಕನಿಷ್ಟಗೊಳಿಸುತ್ತದೆ .ವಿಶ್ವದ ವಿವಿಧೆಡೆ ರೈಲುಗಳಲ್ಲಿ ಈಗಾಗಲೇ ಈ ಸುಧಾರಿತ ಸಾಧನವನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಪ್ರತೀ ಬೋಗಿಗಳಿಗೆ ಸುಮಾರು 20 ಲಕ್ಷ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಪ್ರಾಯೋಗಿಕ ಸಂಚಾರದ ಬಳಿಕ ಇನ್ನೂ ಹಲವು ಬೋಗಿಗಳಲ್ಲಿ ಅಳವಡಿಸಲಾಗುವುದು. ಪ್ರಯಾಣದ ಸಂದರ್ಭ ರೈಲಿನ ಕುರಿತ ಮಾಹಿತಿಯನ್ನು ನಿರಂತರ ಘೋಷಿಸುವುದರ ಜೊತೆಗೆ, ರೈಲುಗಳಲ್ಲಿ ಅಂತರ್‌ಜಾಲ ಆಧರಿತ ವ್ಯವಸ್ಥೆಯ ಮೂಲಕ ಪ್ರಯಾಣಿಕರಿಗೆ ಮನೋರಂಜನೆಯ ಒದಗಿಸಲೂ ಅವಕಾಶವಿದೆ. 2016ರ ನವೆಂಬರ್‌ನಲ್ಲಿ ಆಯೋಜಿಸಲಾಗಿದ್ದ ರೈಲ್ವೇ ಅಭಿವೃದ್ಧಿ ಶಿಬಿರದಲ್ಲಿ ಒಬಿಸಿಎಂಎಸ್ ವ್ಯವಸ್ಥೆಯನ್ನು ಪ್ರದರ್ಶಿಸಲಾಗಿತ್ತು.







